ಬ್ರಹ್ಮಾವರ: ಅನಾಥ, ರಕ್ಷಣೆಯಿಲ್ಲದ, ವಯಸ್ಸಾದ ಗೋವುಗಳ ರಕ್ಷಣೆ ನೋಡಿ ಹೃದಯ ತುಂಬಿ ಬಂದಿದೆ. ಆಶ್ರಮದಲ್ಲಿ 150ಕ್ಕೂ ಮಿಕ್ಕಿ ಹಸುಗಳು ನೆಮ್ಮದಿಯಾಗಿರುವುದನ್ನು ಕಂಡು ಸಂತುಷ್ಟನಾಗಿದ್ದೇನೆ. ಅನಾಥ ಗೋವುಗಳ ರಕ್ಷಣೆ, ಅವುಗಳಿಗೆ ಸಹಕಾರ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಎಂದು ಶೃಂಗೇರಿ ಶಾರದಾ ಪೀಠ ಕಿರಿಯ ಯತಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.ಬ್ರಹ್ಮಾವರ ತಾಲೂಕು ನೆಂಚಾರು ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಆಶ್ರಮಕ್ಕೆ ಭಾನುವಾರ ಭೇಟಿ, ಗೋ ಆಶ್ರಮ ಸಂದರ್ಶನ, ಗೋಗ್ರಾಸ ಸಮರ್ಪಣೆ ಬಳಿಕ ನಡೆದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಅನಾಥ ಗೋವುಗಳ ರಕ್ಷಣೆಗೆ ಕೈಲಾದಷ್ಟು ಸಂಪನ್ಮೂಲ ನೀಡಿ.ಹುಟ್ಟುಹಬ್ಬ ಇನ್ನಿತರ ಶುಭ ಕಾರ್ಯಕ್ರಮಗಳನ್ನು ಗೋ ಶಾಲೆಯಲ್ಲಿ ಮಾಡಿ. ಗೋಗ್ರಾಸ ನೀಡುವುದಲ್ಲದೆ ಅನಾಥ ಗೋವುಗಳ ರಕ್ಷಣೆಗೆ ಕೈಲಾದಷ್ಟು ಸಂಪನ್ಮೂಲ ನೀಡಬೇಕು. ತಾಯಿ ಬಿಟ್ಟು ಮತ್ತೊಬ್ಬಳು ಮಾತೆ ಗೋವು. ನಮ್ಮ ವೇದ ಕಾಲಗಳಿಂದಲೂ ಗೋವುಗಳಿಗೆ ವಿಶಿಷ್ಟ ಸ್ಥಾನವಿದೆ. ಗೋವುಗಳನ್ನು ಮಾತಾ ಎಂದು ಕರೆಯುತ್ತಿದ್ದು, ಗೋ ಸೇವೆ ಮಾಡುವುದು ಭಗವಂತನ ಸೇವೆ ಮಾಡಿದಂತೆ ಎಂದರು.ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಅಧ್ಯಕ್ಷ ರಾಜೇಂದ್ರ ಚೆಕ್ಕೇರ ಮತ್ತು ಲಲಿತಾ ಚೆಕ್ಕೇರ ಸ್ವಾಮೀಜಿಯ ಪಾದ ಪೂಜೆ ಮಾಡಿ ಗುರುವಂದನೆ ಈ ಸಂದರ್ಭ ಸ್ವಾಮೀಜಿ ಗೋ ಆಶ್ರಮಕ್ಕೆ 50 ಸಾವಿರ ರೂ. ಧನಸಹಾಯ ನೀಡಿ, ಮುಂದೆಯೂ ಮಠದ ಸಹಕಾರ ನೀಡುವ ಭರವಸೆ ನೀಡಿದರು. ಮಠದ ಆಡಳಿತಾಧಿಕಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿ.ಆರ್. ಗೌರಿಶಂಕರ್, ಶೃಂಗೇರಿ ಮಠ ಪ್ರಾಂತೀಯ ಅಧಿಕಾರಿ ಲೋಕೇಶ್ ಅಡಿಗ, ವಾಗೀಶ್ ಶಾಸ್ತ್ರಿ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಉಡುಪಿ, ಸೂರಾಲು ವಲಯ ಬ್ರಾಹ್ಮಣ ಸಮಿತಿ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ಕಾಮಧೇನು ಗೋಶಾಲಾ ಮಹಾ ಸಂಘ ಟ್ರಸ್ಟ್ ನ ವಿಶ್ವನಾಥ ಬಾಯಿರಿ, ಖಜಾಂಚಿ ಕೆ. ರಾಮಕೃಷ್ಣ ಆಚಾರ್ಯ, ಶ್ರೀಕಾಂತ ಶೆಟ್ಟಿ, ವಿಶ್ವನಾಥ ಬಾಯಿರಿ, ಗ್ರಾಪಂ ಸದಸ್ಯ ಸತೀಶ್ ಪೂಜಾರಿ, ಢಮರುಗ ಸೇವೆ ನರ್ತಕ ಬಾಲಕೃಷ್ಣ ವೈದ್ಯ, ಸೂರಾಲು ವಲಯ ತಂತ್ರಿ ದೇವಿ ಪ್ರಸಾದ ಶೆಟ್ಟಿ ಮತ್ತಿತರರು ಇದ್ದರು. ದಯಾನಂದ ಶರ್ಮಾ ನಿರೂಪಿಸಿದರು.