ಉಡುಪಿ, ಜೂನ್ 14: ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿಗುತ್ತಿಗೆದಾರರಿಗೆ ಹಾಗೂ ಈಗಾಗಲೇ ಅವಧಿ ಮುಗಿದಿರುವ ಈ ಹಿಂದೆ ನಿರ್ವಹಿಸಿದ ಕಲ್ಲು ಗಣಿಗುತ್ತಿಗೆದಾರರೂ ಸಹ ಕಲ್ಲುಕೋರೆಗಳ ಸುತ್ತಲೂ ತಂತಿ ಬೇಲಿ ಅಳವಡಿಸಿ, ಅಪಾಯ ಪ್ರದೇಶ ಎಂಬ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಲು ಸೂಚಿಸಿದೆ. ಅವಧಿ ಮುಗಿದಿರುವ ಕಲ್ಲು ಗಣಿಗುತ್ತಿಗೆ ಪ್ರದೇಶದಲ್ಲಿ ಅವಘಡಗಳು ಸಂಭವಿಸಿದಲ್ಲಿ ಸಂಬಂಧಿಸಿದ ಕಲ್ಲು ಗಣಿಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ಮಳೆಗಾಲದಲ್ಲಿ ಜಿಲ್ಲೆಯ ಕಲ್ಲು ಕೋರೆಗಳು ಹಾಗೂ ಈ ಹಿಂದೆ ನಿರ್ವಹಿಸಿದ ಕಲ್ಲು ಕೋರೆ ಗುಂಡಿಗಳಲ್ಲಿ ನೀರು ಸಂಗ್ರಹವಾಗಿರುತ್ತದೆ. ಆದ್ದರಿಂದ ನೀರು ತುಂಬಿರುವ ಕಲ್ಲುಕೋರೆ ಗುಂಡಿಗಳ ಬಳಿ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ತೆರಳದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..