ಎಂ.ಆರ್.ಎಫ್ ಘಟಕದಿಂದ ಉಡುಪಿ ನಗರ ಇನ್ನಷ್ಟು ಸ್ವಚ್ಛ ಮತ್ತು ಸುಂದರ: ಶಾಸಕ ಕೆ. ರಘುಪತಿ ಭಟ್

ಉಡುಪಿ: ಕರ್ವಾಲ್‌ನಲ್ಲಿ ಆರಂಭಿಸಿರುವ ಎಂ.ಆರ್.ಎಫ್ ಘಟಕದಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಉಡುಪಿ ನಗರವನ್ನು ಇನ್ನಷ್ಟು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಸಾಧ್ಯವಾಗಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಅವರು ಕರ್ವಾಲುನಲ್ಲಿ, ಉಡುಪಿ ನಗರಸಭೆಯಿಂದ, 2.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 10 ಟನ್ ಸಾಮರ್ಥ್ಯದ ನೂತನ ಎಂ.ಆರ್.ಎಫ್. ಘಟಕ ಉದ್ಘಾಟಿಸಿ ಮಾತನಾಡಿದರು.

ಉಡುಪಿ ನಗರದಲ್ಲಿ ಪ್ರಸ್ತುತ ಪ್ರತಿದಿನ 20 ಟನ್ ಒಣ ಕಸ ಸಂಗ್ರಹ ನಡೆಯುತ್ತಿದ್ದು, ಬೀಡನಗುಡ್ಡೆ ಮತ್ತು ಕರಾವಳಿ ಬೈಪಾಸ್ ಬಳಿ ಇರುವ ತಲಾ 4 ಟನ್ ಸಾಮರ್ಥ್ಯ ಮಿನಿ ಎಂ.ಆರ್.ಎಫ್ ಘಟಕಗಳ ಮೂಲಕ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದು, ಈ ನೂತನ ಘಟಕದಲ್ಲಿ 12 ಟನ್ ವರೆಗೂ ಕಸ ವಿಲೇವಾರಿ ಮಾಡಲು ಸಾಧ್ಯವಾಗಲಿದೆ. ಮುಂದಿನ ದಿನದಲ್ಲಿ ಇದನ್ನು ಇನ್ನೂ ಹೆಚ್ಚುವರಿ 10 ಟನ್ ಸಾಮರ್ಥ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದರು.

ನಗರದಲ್ಲಿ ಸಂಗ್ರಹವಾಗುತ್ತಿರುವ ಹಸಿ ಕಸದ ವಿಲೇವಾರಿಗಾಗಿ ಕರ್ವಾಲು ನಲ್ಲಿ ಶೀಘ್ರದಲ್ಲಿ ಪ್ರತ್ಯೇಕ ವಿಲೇ ಘಟಕ ಆರಂಭಿಸಲಾಗುವುದು ಎಂದ ಶಾಸಕರು, ನೂತನ ಎಂ.ಆರ್.ಎಫ್ ಘಟಕದಲ್ಲಿ ಒಣ ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ, ಬೇಲಿಂಗ್ ಮಾಡಿ ಮಾರಾಟ ಮಾಡಬಹುದಾಗಿದ್ದು, ಇದರ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ನೀಡಲಾಗುವುದು ಎಂದರು.

ಕರ್ವಾಲು ನಲ್ಲಿ ಈಗಾಗಲೇ ಸಂಗ್ರಹವಾಗಿರುವ ಕಸವನ್ನೂ ಸಹ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ, ಈ ಪ್ರದೇಶವನ್ನು ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು. ಉಡುಪಿ ನಗರದ ಸ್ವಚ್ಛತೆಯ ದೃಷ್ಟಿಯಿಂದ ಎಂ.ಆರ್.ಎಫ್ ಘಟಕದ ನಿರ್ಮಾಣವು ಅತ್ಯಂತ ಪ್ರಮುಖವಾಗಿದ್ದು, ನಗರವು ಇನ್ನಷ್ಟು ಸ್ವಚ್ಛ ಮತ್ತು ಸುಂದರವಾಗಿ ರೂಪುಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಪೌರಾಯುಕ್ತ ಉದಯ ಶೆಟ್ಟಿ, ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಶ್ವಂತ ಪ್ರಭು, ಪರಿಸರ ಅಧಿಕಾರಿ ಸ್ನೇಹಾ ಹಾಗೂ ನಗರಸಭೆಯ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.