ಮಣಿಪಾಲ: ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ನಿರ್ಮಿಸಿದ ಹೊಸ ರೋ।। ಕೆ ಕೃಷ್ಣ ಪ್ರಭು ಓ ಪಿ ಡಿ ಬ್ಲಾಕ್ ಮತ್ತು ಹೊಸ ಶಸ್ತ್ರಚಿಕಿತ್ಸಾ ಸಂಕೀರ್ಣದ ಉದ್ಘಾಟನೆಯನ್ನು ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಅವರು ನೆರವೇರಿಸಿದರು. ನಂತರ ನಡೆದ ಸಮಾರಂಭಾದಲ್ಲಿ ಮಾತನಾಡಿದ ಅವರು ಆರೋಗ್ಯ ಕ್ಷೇತ್ರದಲ್ಲಿ ಕೋವಿಡ್ ಸಮಯ ಸೇರಿದಂತೆ ಮಣಿಪಾಲ ಸಂಸ್ಥೆ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಈಗ ಕಾರ್ಕಳದ ಡಾ ಟಿ.ಎಂ.ಎ. ಪೈ ಆಸ್ಪತ್ರೆ ಕಾರ್ಕಳವನ್ನು ಆಧುನಿಕ ಸೌಅಭ್ಯದೊಂದಿಗೆ ಮೇಲ್ದರ್ಜೆಗೆ ಏರಿಸುತ್ತಿರುವುದರಿಂದ, ಕಾರ್ಕಳದ ಜನತೆಗೆ ಇನ್ನಷ್ಟು ಆರೋಗ್ಯ ಸೇವೆ ಸಿಗುವಂತಾಗಿದೆ ಎಂದರು.ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್- ಉಪಕುಲಪತಿಗಳು, ಮಾಹೆ, ಮಣಿಪಾಲ ಮತ್ತು ಡಾ. ಶರತ್ ಕುಮಾರ್ ರಾವ್, ಸಹ – ಉಪ ಕುಲಪತಿಗಳು -ಆರೋಗ್ಯ ವಿಜ್ಞಾನ, ಮಾಹೆ ಮಣಿಪಾಲ ಅವರುಗಳು ಗೌರವ ಅಥಿತಿಗಳಾಗಿದ್ದರು. ಡಾ. ಎಚ್.ಎಸ್. ಬಲ್ಲಾಳ್-ಸಹ ಕುಲಾಧಿಪತಿಗಳು ಮಾಹೆ, ಮಣಿಪಾಲ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು, ಈಗ ಈ ಸುಧಾರಿತ ಸೌಲಭ್ಯವನ್ನು ಆರಂಭಿಸಿರುವುದರಿಂದ ಕಾರ್ಕಳದ ಟಿಎಂಎ ಪೈ ಆಸ್ಪತ್ರೆ, ಸಂಪೂರ್ಣವಾಗಿ ದ್ವಿತೀಯ ಆರೋಗ್ಯ ಕೇಂದ್ರ ಮಟ್ಟಕೆ ಏರಿಸಿದಂತಾಗಿದೆ. ಶೀಘ್ರದಲ್ಲೇ 24*7 ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ, ಸಿ ಟಿ ಸ್ಕ್ಯಾನ್ ಸೇರಿದಂತೆ ಇನ್ನಷ್ಟು ಸೌಲಭ್ಯವನ್ನು ಇಲ್ಲಿ ಆರಂಭಿಸಲಾಗುವುದು ಎಂದರು. ಆದ್ದರಿಂದ ಈಗ, ರೋಗಿಯು ದ್ವಿತೀಯ ಮಟ್ಟದ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಬರುವ ಅಗತ್ಯವಿಲ್ಲ.ಪ್ರಾಸ್ತಾವಿಕವಾಗಿ ಮಾತನಾಡಿದ ಡಾ ಶರತ್ ಕುಮಾರ್ ರಾವ್ ಅವರು, ಡಾ. ಟಿಎಂಎ ಪೈ ಆಸ್ಪತ್ರೆಯು ಆರಂಭದಿಂದ ಇಲ್ಲಿಯವರೆಗೆ ಬೆಳೆದು ಬಂದ ದಿನಗಳನ್ನು ಮತ್ತು ರೋಟರಿ ಸಂಸ್ಥೆಯ ಸಹಕಾರವನ್ನು ನೆನಪಿಸಿದರು. ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಡಾ. ಎಚ್.ಎಸ್. ಬಲ್ಲಾಳ್ ಅವರು, ಡಾ ಟಿ ಎಂ ಎ ಪೈ ಆಸ್ಪತ್ರೆ ಕಾರ್ಕಳ ಆರಂಭಕ್ಕೆ ಕಾರಣವಾದ ದಿನಗಳನ್ನು ನೆನಪಿಸಿಕೊಂಡರು ಮತ್ತು ಕಾರ್ಕಳದ ರೋಟರಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಇನ್ನು ಮುಂದೆಯೂ ಈ ಆಸ್ಪತ್ರೆ ಗೆ ಇನ್ನಷ್ಟು ಅಭಿವೃದ್ಧಿ ಕ್ರಮಗಳನ್ನು ಕೈ ಗೊಳ್ಳುವುದರ ಮೂಲಕ ಕಾರ್ಕಳದ ಜನತೆಗೆ ಸುಧಾರಿತ ಚಿಕಿತ್ಸೆ ನೀಡಲು ಮಾಹೆ ಮಣಿಪಾಲವು ಬದ್ಧವಾಗಿದೆ ಎಂದರು.
ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ಸ್ವಾಗತಿಸಿ , ಡಾ ಸಂಜಯ್ ಕುಮಾರ್ ಅವರು ವಂದಿಸಿದರು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾಹೆ ಮಣಿಪಾಲದ ಹಿರಿಯ ಅಧಿಕಾರಿಗಳು, ರೋಟರಿ ಗಣ್ಯರು ಹಾಗೂ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.