ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಅನುಕೂಲವಾಗುವಂತೆ ಈಗಾಗಲೇ ರಚಿಸಲಾಗಿರುವ ವಿವಿಧ ತಂಡಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ಸಮನ್ವಯದಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು.

ಅವರು ಕುಂದಾಪುರದ ಭಂಡಾರ್ಕರ್ ಕಾಲೇಜಿನಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023 ರ ಸಂಬಂಧಿಸಿದಂತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಈಗಾಗಲೇ, ಮಾದರಿ ನೀತಿ ಸಂಹಿತೆ, ಸೆಕ್ಟರ್ ಅಧಿಕಾರಿಗಳ ತಂಡ, ಪೊಲೀಸ್ ತಂಡ, ಫ್ಲೆಯಿಂಗ್ ಸ್ಕಾಡ್ ತಂಡ, ವೀಡಿಯೋ ವೀಕ್ಷಣಾ ತಂಡ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು, ಅದರಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಅಸ್ಪದ ನೀಡದೇ, ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಯಾವುದೇ ಒತ್ತಡಗಳಿಗೆ ಒಳಗಾಗದೇ, ತಮಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸುವಂತೆ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಹಾಕೆ ಮಚ್ಚಿಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು. ಮಾಸ್ಟರ್ ಟ್ರೆನರ್ ಡಾ.ಅಶೋಕ್ ಕಾಮತ್ ತರಬೇತಿ ನೀಡಿದರು.