ನವದೆಹಲಿ: ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳ ಇತ್ತೀಚಿನ ಟ್ರೆಂಡ್ಗಳ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ತ್ರಿಪುರಾ ಮತ್ತು ನಾಗಾಲ್ಯಾಂಡ್ ಎರಡರಲ್ಲೂ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿವೆ. ಏತನ್ಮಧ್ಯೆ, ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್ಪಿಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತದ ಕೊರತೆಯಿಂದಾಗಿ ಮೇಘಾಲಯವು ಸಮ್ಮಿಶ್ರ ಸರಕಾರ ರಚಿಸುವತ್ತ ಸಾಗುತ್ತಿದೆ.
ಚುನಾವಣಾ ಟ್ರೆಂಡ್ಗಳು ಇದೇ ರೀತಿ ಮುಂದುವರಿದಲ್ಲಿ ಬಿಜೆಪಿಯು ಈಶಾನ್ಯ ಭಾರತದಲ್ಲಿ ತನ್ನ ಬಲವಾದ ಹಿಡಿತವನ್ನು ಉಳಿಸಿಕೊಳ್ಳುತ್ತದೆ ಮತ್ತು 8 ರಲ್ಲಿ 7 ರಾಜ್ಯಗಳಲ್ಲಿ ಸರ್ಕಾರವನ್ನು ಹೊಂದಲಿದೆ. ಏತನ್ಮಧ್ಯೆ, ಒಂದು ಕಾಲದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಪ್ರಬಲ ಹಿಡಿತವನ್ನು ಹೊಂದಿದ್ದ ಕಾಂಗ್ರೆಸ್ ಈ ವರ್ಷ ಮೂರೂ ರಾಜ್ಯಗಳಲ್ಲಿ ಛಾಪು ಮೂಡಿಸಲು ವಿಫಲವಾಗಿದೆ.
ನಾಗಾಲ್ಯಾಂಡ್ ನಲ್ಲಿ 60 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್.ಡಿ.ಪಿ.ಪಿ 24 ಮತ್ತು ಬಿಜೆಪಿ 12 ಸೀಟುಗಳನ್ನು ಪಡೆದು ಬಹುಮತ ಪಡೆಯುವತ್ತ ಸಾಗಿದೆ. ಕಾಂಗ್ರೆಸ್ ಶೂನ್ಯ ಸಂಪಾದನೆ ಹೊಂದಿದ್ದರೆ ಇತರರು 22 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ತ್ರಿಪುರಾದ 60 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 22 ಸೀಟುಗಳಲ್ಲಿ ಮುಂದಿದ್ದರೆ, ಟಿಎಂಪಿ 12, ಸಿಪಿಎಂ 11 ಮತ್ತು ಕಾಂಗ್ರೆಸ್ 3 ಸೀಟುಗಳನ್ನು ಪಡೆದಿವೆ.
ಮೇಘಾಲಯದ 59 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್.ಪಿ.ಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು 25 ಸೀಟುಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ 6, ಟಿಎಂಸಿ 5, ಬಿಜೆಪಿ 3 ಮತ್ತು ಇತರರು 20 ಕ್ಷೇತ್ರಗಳಲ್ಲಿ ಮುಂದಿದ್ದಾರೆ.
ಮಹಾರಾಷ್ಟ್ರದ ಪುಣೆಯ ಚಿಂಚ್ ವಾಡಾ ದಲ್ಲಿ ಬಿಜೆಪಿಯ ಅಶ್ವಿನಿ ಜಗತಾಪ್ 23,000 ಮತಗಳಿಂದ ಮುನ್ನಡೆಯಲ್ಲಿದ್ದರೆ, ಕಸ್ಬಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್ ವಿಜಯ ಸಾಧಿಸಿದ್ದಾರೆ.