ಕೇಂದ್ರ ಬಜೆಟ್ ನಲ್ಲಿ ಪರಿಸರ ಅರ್ಥಶಾಸ್ತ್ರಕ್ಕೆ ನಿರೀಕ್ಷಿತ ಪ್ರಮಾಣದ ಬೆಂಬಲವಿಲ್ಲ: ಡಾ.ರೆಸ್ಮಿ ಭಾಸ್ಕರನ್

ಮಣಿಪಾಲ: ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ “ಯೂನಿಯನ್ ಬಜೆಟ್ -2023” ಅನ್ನು ಪರಿಸರ ಅರ್ಥಶಾಸ್ತ್ರದ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಅದು ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಬಜೆಟ್‌ನಲ್ಲಿ ಭರವಸೆ ನೀಡಿರುವ ಹಸಿರು ಬೆಳವಣಿಗೆಯು ಸದ್ಯದ ಪರಿಸರಕ್ಕೆ ಒದಗಿರುವ ಸವಾಲುಗಳನ್ನು ಎದುರಿಸಲು ಸಾಕಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞೆ ಮತ್ತು ಲೇಖಕಿ ಡಾ.ರೆಸ್ಮಿ ಭಾಸ್ಕರನ್ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಆಶ್ರಯದಲ್ಲಿ ‘ಕೇಂದ್ರ ಬಜೆಟ್ ಮತ್ತು ಪರಿಸರ ಅರ್ಥಶಾಸ್ತ್ರ’ದ ಕುರಿತು ಎರಡು ಉಪನ್ಯಾಸಗಳನ್ನು ನೀಡಿ ಮಾತನಾಡಿದ ಡಾ.ರೆಸ್ಮಿ ಭಾಸ್ಕರನ್, ಹಸಿರು ಬೆಳವಣಿಗೆಯ ಭಾಗವಾಗಿ ಶಕ್ತಿ ಪರಿವರ್ತನೆ ಮತ್ತು ಹಸಿರು ಕ್ರೆಡಿಟ್ ಕಾರ್ಯಕ್ರಮದಂತಹ ಕ್ರಮಗಳು ಸದ್ಯದ ಪರಿಸರದ ಸವಾಲುಗಳನ್ನು ಪರಿಹರಿಸಲು ಸಾಲದು ಎಂದು ತೋರುತ್ತದೆ ಎಂದರು.

ಅದಕ್ಕೂ ಮಿಗಿಲಾಗಿ ಕೇವಲ ‘ಬೆಳವಣಿಗೆ’ಯನ್ನು ದೃಷ್ಟಿಯಲ್ಲಿಕೊಂಡ ಪರಿಹಾರಗಳು ಅಸಮಾನತೆಯನ್ನು
ತೊಡೆದುಹಾಕುವುದಿಲ್ಲ. ಬಜೆಟ್ ವೈಯಕ್ತಿಕ ಆದಾಯ ಅಥವಾ ಪ್ರಾದೇಶಿಕ ಅಸಮತೋಲನವನ್ನು ಒಳಗೊಂಡು
ಎಲ್ಲಾ ರೀತಿಯ ಅಸಮಾನತೆಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿರಬೇಕು. ಅಭಿವೃದ್ಧಿಯು
ಬೆಳವಣಿಗೆಗಿಂತ ಭಿನ್ನವಾದದ್ದು, ನಿಜ ಅರ್ಥದಲ್ಲಿ ಇದು ಪ್ರಾಥಮಿಕ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಮೇಲೆ ಕೇಂದ್ರೀಕೃತವಾಗಿರಬೇಕು. ಬಜೆಟ್ ಬೆಳವಣಿಗೆಯೊಂದಿಗೆ ಅಭಿವೃದ್ಧಿಯ ಪರಿಕಲ್ಪನೆಯನ್ನು ತಪ್ಪಾಗಿ
ಅರ್ಥೈಸಿಕೊಂಡರೆ ಕೇವಲ ಬೆಳವಣಿಗೆಯ ಮೇಲೆ ಹೆಚ್ಚು ಮತ್ತು ಅಭಿವೃದ್ಧಿಯ ಮೇಲೆ ಕಡಿಮೆ ಗಮನಹರಿಸುತ್ತದೆ
ಮತ್ತು ನಿರೀಕ್ಷೆಗಳನ್ನು ಹುಸಿಮಾಡುತ್ತದೆ ಎಂದು ಅವರು ವಾದಿಸಿದರು.

ಮಾನವ ಅಭಿವೃದ್ಧಿಯ ಮಹತ್ವದ ಕ್ಷೇತ್ರಗಳಿಂದ ಸರ್ಕಾರಗಳು ಹೇಗೆ ಹೆಚ್ಚು ಹೆಚ್ಚು ಹಿಂದೆ ಸರಿಯುತ್ತಿವೆ ಮತ್ತು ಈ ಕ್ಷೇತ್ರಗಳ ಮೇಲೆ ಕಡಿಮೆ ಹೂಡಿಕೆ ಮಾಡುತ್ತಿವೆ ಎಂದು ಅಂಕಿಅಂಶಗಳೊಂದಿಗೆ ಡಾ. ರೆಸ್ಮಿ ತೋರಿಸಿದರು. ಕೇವಲ ಬೆಳವಣಿಗೆಯು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವುದಿಲ್ಲ ಮತ್ತು ಹಸಿರು ಬೆಳವಣಿಗೆ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಪರಿಸರ ಅರ್ಥಶಾಸ್ತ್ರವು ಈ ಕಾಲದ ಅಗತ್ಯವಾಗಿದ್ದು, ಇದು
ಸರ್ವೋದಯ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಕಾಳಜಿಯನ್ನು ಒಳಗೊಳ್ಳುವ ಅಗತ್ಯವಿದೆ ಎಂದು ವಾದಿಸಿದರು.

ಮಾಹೆಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ವಿಕ್ರಂ ಬಾಳಿಗಾ, ಡಾ.ಅಂಬಿಗೈ ಹಾಗೂ ವಿದ್ಯಾರ್ಥಿಗಳು
ಸಂವಾದದಲ್ಲಿ ಪಾಲ್ಗೊಂಡಿದ್ದರು.