ಸಾವನ್ನು ಗೆದ್ದು ಬಂದ ಪಾಂಡುರಂಗ ಶೆಟ್ಟರು

ನಡೂರು ನಡುಮನೆ ದೊಡ್ಡ ಮನೆತನವಾದರೂ ಪಾಂಡುರಂಗ ಶೆಟ್ಟಿಯವರು ಶಾಲೆಗೆ ಸೇರುವ ಹೊತ್ತಿಗೆ ಬಡತನ ಪ್ರವೇಶ ಆಗಿತ್ತು. ಅನ್ನ ಮತ್ತು ವಸ್ತ್ರಕ್ಕೆ ತತ್ವಾರ ಬಂದೊದಗಿತ್ತು. ಆರನೇ ಕ್ಲಾಸು ಪಾಸ್ ಮಾಡಲಾರದೆ ಧಾರವಾಡಕ್ಕೆ ಬಸ್ಸು ಹತ್ತಿದರು. ಅಲ್ಲಿ ಮಾವ ಹೋಟೇಲು ನಡೆಸುತ್ತಿದ್ದರು. ಏಳು ವರ್ಷ ಮಾವನ ಹೋಟೇಲಿನಲ್ಲಿ ಕೆಲಸ ಮಾಡಿದರು. ಬಳಿಕ ಅಲ್ಲಿಂದ ಹೊರ ಬಂದು ಸಣ್ಣದೊಂದು ಹೋಟೇಲು ಶುರು ಮಾಡಿದರು. ಮತ್ತೆ ಊರಿನತ್ತ ಹಿಂತಿರುಗುವಾಗ ವರ್ಷ 32 ಆಗಿತ್ತು. ಮದುವೆ ಆಯಿತು, ಊರಲ್ಲಿ ಒಂದು ಅಂಗಡಿ ತೆರೆದರು. ಗೆಳೆಯರು, ಊರವರು ಬೆಂಬಲಕ್ಕೆ ನಿಂತರು. ಕೆಟರಿಂಗ್ ಬಿಸಿನೆಸ್ ಶುರು ಮಾಡಿದರು. ಸಂಸಾರ ಬೆಳೆಯಿತು, ರಾಜಕೀಯ ಚಟುವಟಿಕೆಗಳಲ್ಲೂ ಶೆಟ್ಟಿಯವರು ಕಾಣಲಾರಂಭಿಸಿದರು. ಗುರುತು-ಪರಿಚಯ ವಿಸ್ತರಿಸಿತು.

ಧಾರವಾಡದಲ್ಲಿ ಇದ್ದ ದಿನಗಳಲ್ಲಿ ಶೆಟ್ಟರಿಗೆ ಇಬ್ಬರು ಬಹಳ ಆತ್ಮೀಯ ಗೆಳೆಯರಿದ್ದರು. ಒಂದು ಸಾರಾಯಿ; ಇನ್ನೊಂದು ಸಿಗರೇಟು. ‘ನಾನು ವಿಪರೀತ ಸಿಗರೇಟ್ ಸೇದುತ್ತಿದ್ದೆ, ಲೆಕ್ಕ ಇಲ್ದೆ ಸಾರಾಯಿ ಕುಡಿಯುತ್ತಿದ್ದೆ’ ಎಂದು ಪಾಂಡುರಂಗ ಶೆಟ್ಟರು ಹೇಳುತ್ತಾರೆ. ಅದರ ಅಡ್ಡ ಪರಿಣಾಮ ಇರಬಹುದೇನೋ ಒಂದಲ್ಲ, ಎರಡಲ್ಲ; ಮೂರು ಸಲ ಹಾರ್ಟ್ ಅಟ್ಯಾಕ್ ಆಯಿತು. ಥರ್ಡ್ ಟೈಂ ಮೇಜರ್ ಸರ್ಜರಿ ಆಗಬೇಕಾಗಿ ಬಂತು. ಶೆಟ್ಟರು ಸಾವನ್ನು ಗೆದ್ದು ಬಂದರು.

ನಾಲ್ಕು ವರ್ಷಗಳ ಹಿಂದೆ ಕುತ್ತಿಗೆಯಲ್ಲಿ ಗೆಡ್ಡೆಯ ತರಹ ಕಾಣಿಸಿಕೊಂಡಿತು. ಬ್ರಹ್ಮಾವರದ ವೈದ್ಯರು ‘ಡೌಟ್ ಇದೆ’ ಎಂದರು. ಕುಂದಾಪುರದ ಸಂಬಂಧಿ ವೈದ್ಯರನ್ನು ಕಂಡಾಗ ಅವ್ರು ‘ಮಂಗಳೂರಲ್ಲಿ ಪರೀಕ್ಷೆ ಮಾಡ್ಸಿ’ ಎಂಬ ಸಲಹೆ ಕೊಟ್ರು. ಮಂಗಳೂರಿನಲ್ಲಿ ಸೂಜಿ ಪರೀಕ್ಷೆ ನಡೆಸಿದ ವೈದ್ಯರು ರಿಸಲ್ಟ್ ಹೇಳಲು ಹಿಂದೇಟು ಹಾಕಿದರು. ‘ನಿಮ್ಗೆ ಎಂತ ಹೇಳ್ಲೆ ಮುಜುಗರ, ಕಾಯಿಲೆ ನನ್ಗೆ ಅಲ್ದ, ಏನಂತ ಹೇಳಿ ಬಿಡಿ. ತಡಕೊಳ್ಳುವ ಶಕ್ತಿ ಇತ್ತ್’ ಎಂದರು ಪಾಂಡುರಂಗ ಶೆಟ್ಟಿ. ‘ಕ್ಯಾನ್ಸರ್ ಆಗಿದೆ. ನಾಲ್ಕನೇ ಹಂತ. ಬೇಗನೆ ಚಿಕಿತ್ಸೆ ಪಡೆಯ ಬೇಕು’ ವೈದ್ಯರು ತಿಳಿಸಿದರು. ಪಾಂಡುರಂಗ ಶೆಟ್ಟಿಯವರು ಕುಗ್ಗಲಿಲ್ಲ, ಧೈರ್ಯ ಕಳೆದುಕೊಳ್ಳಲಿಲ್ಲ. ಡಾಕ್ಟ್ರು ಹೇಳಿದಂತೆ ಮಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ನಿರಂತರ ಆರು ತಿಂಗಳು ಚಿಕಿತ್ಸೆಗೆ ಒಳಗಾದರು. ಮುಂದೆ 35 ದಿನ ಮುಂಜಾನೆ ಪುತ್ರ ಮಂಗಳೂರಿಗೆ ಕರೆದೊಯ್ದು ಬಂದು ಚಿಕಿತ್ಸೆ ಕೊಡಿಸಿದರು. ಶೆಟ್ಟರ ಮನೋ ಧೈರ್ಯ ಎಷ್ಟು ಅಧ್ಭುತವಾಗಿತೆಂದರೆ ಆಪರೇಶನ್ ಆದ ಮಾರನೇ ದಿನವೇ ಸ್ಕೂಟರ್ ಹತ್ತಿ ಬ್ರಹ್ಮಾವರಕ್ಕೆ ತೆರಳಿದ್ದರು. ಕುಟುಂಬದ ಸದಸ್ಯರು ವೈದ್ಯರಲ್ಲಿ ದೂರಿದಾಗ ‘ಅವರು ಎಲ್ಲಿ ಬೇಕಾದರೂ ಹೋಗಲಿ; ಏನೂ ಆಗದು’ ಎಂದರಂತೆ.
ಶೆಟ್ಟರು ಅಚ್ಚರಿಯ ರೀತಿಯಲ್ಲಿ ಕ್ಯಾನ್ಸರ್ ಗೆದ್ದು ಬಂದರು. ಅವರೇ ಹೇಳುವಂತೆ ಅದೊಂದು ಪುನರ್ಜನ್ಮ.

ಪತ್ನಿ, ಮಕ್ಕಳು ತೆಗೆದುಕೊಂಡ ಕಾಳಜಿ, ಊರ ಮಂದಿಯ ಹಾರೈಕೆ ಮರು ಜನ್ಮಕ್ಕೆ ಕಾರಣವಂತೆ. ಜೊತೆಗೆ ನನ್ನ ಭಂಡ ಧೈರ್ಯ, ಮನೋ ಸ್ಥೈರ್ಯ ಕಾಪಾಡಿದೆ ಎನ್ನುತ್ತಾರೆ ಪಾಂಡುರಂಗ ಶೆಟ್ಟರು. ಕ್ಯಾನ್ಸರ್ ಗೆದ್ದವರಿಗೆ ಮನೆಯಲ್ಲಿ ಸುಮ್ಮನೆ ಕೂರುವುದು ಆಗದು ಅನಿಸಿತು. ಅಂಗಡಿ, ಕೆಟರಿಂಗ್ ನಡುವೆ ಗ್ರಾಮ ಪಂಚಾಯತು ಎಲೆಕ್ಷನ್ಗೆ ನಿಂತರು. ಹಿಂದೊಮ್ಮೆ ತ್ರಿಕೋನ ಸ್ಪರ್ಧೆಯಲ್ಲಿ ನಾಕು ಓಟಿಗೆ ಗೆಲುವು ಕಳೆದುಕೊಂಡದ್ದು ನೆನಪಿತ್ತು. ಆದ್ರೆ ಈ ಸಲ ಹಾಗೆ ಆಗಲಿಲ್ಲ. ಚುನಾವಣೆಯಲ್ಲೂ ಗೆದ್ದು ಬಿಟ್ಟರು.

ಕಾಡೂರು ಗ್ರಾಮ ಪಂಚಾಯತು ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾದರು. ಮತ ಲೆಕ್ಕ ಮಾಡಿದಾಗ ಇಬ್ಬರಿಗೂ ಸಮ ಸಮ. ಚುನಾವಣಾಧಿಕಾರಿ ಚೀಟಿ ಎತ್ತಿದರು, ಅದರಲ್ಲಿ ಪಾಂಡುರಂಗ ಶೆಟ್ಟಿಯವರ ಹೆಸರಿತ್ತು. ಅಧ್ಯಕ್ಷರಾದ ದಿನದಿಂದ ಹನ್ನೊಂದು ಸದಸ್ಯರನ್ನು ಜೊತೆಗೆ ಕರೆದೊಯ್ದು ಗ್ರಾಮ ಸ್ವರಾಜ್ಯ ಕಟ್ಟುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಮಾರ್ಗದರ್ಶನ ಮಾಡುವುದು ಮಾತ್ರವಲ್ಲದೆ ತಮ್ಮಿಂದಾದ ನೆರವನ್ನು ನೀಡುತ್ತಿದ್ದಾರೆ. ‘ಬಂದದೆಲ್ಲಾ ಬರಲಿ ಪಾಂಡುರಂಗನ ದಯೆ ಒಂದಿರಲಿ’ ಎಂದು ಸಮಾಜ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿರುವ ಶೆಟ್ಟರನ್ನು ಬ್ರಹ್ಮಾವರ ವಲಯದಲ್ಲಿ ಮೆಚ್ಚಿಕೊಳ್ಳದವರೇ ಇಲ್ಲ.
‘ಧೈರ್ಯಂ ಸರ್ವತ್ರ ಸಾಧನಂ’ಗೆ ನಮ್ಮೆದುರಿನ ಉದಾಹರಣೆಯಾಗಿ ನಿಲ್ಲುತ್ತಾರೆ ಕಾಡೂರು ನಡು ಮನೆ ಪಾಂಡುರಂಗ ಶೆಟ್ಟರು. ಶೆಟ್ಟರ ಸಮಾಜ ಸೇವೆ ನೂರ್ಕಾಲ ಮುಂದುವರಿಯಲಿ.

ಬರಹ ಮತ್ತು ಚಿತ್ರ: ಬಾಳೇಪುಣಿ