ಜರ್ಮನಿಯಲ್ಲಿ 1.5 ವರ್ಷದ ಮಗುವಿಗಾಗಿ ಮೊರೆಯಿಡುತ್ತಿರುವ ಭಾರತೀಯ ದಂಪತಿಗಳು: ಟ್ವಿಟರ್ ನಲ್ಲಿ ಬಾಯ್ ಕಾಟ್ ಜರ್ಮನಿ ಟ್ರೆಂಡ್

ರ್ಲಿನ್: ಅಹಮದಾಬಾದ್ ಮೂಲದ ಪೋಷಕರಾದ ಭಾವೇಶ್ ಮತ್ತು ಧಾರಾ ಶಾ ಕಳೆದ 1.5 ವರ್ಷದಿಂದ ತಮ್ಮ ಮಗಳು ಅರಿಹಾ ನನ್ನು ವಾಪಾಸು ಕೊಡುವಂತೆ ಜರ್ಮನಿ ಸರಕಾರವನ್ನು ಅಂಗಲಾಚುತ್ತಿದ್ದಾರೆ. ಆದರೆ, ಅಲ್ಲಿನ ಮಕ್ಕಳ ರಕ್ಷಣಾ ಸಂಸ್ಥೆಯು ಪೋಷಕರಿಂದ ಮಗುವನ್ನು ಬಲವಂತವಾಗಿ ಕಿತ್ತುಕೊಂಡು ಪ್ರಕರಣವಿಲ್ಲದಿದ್ದರೂ ಮಗುವನ್ನು ಹಿಂತಿರುಗಿಸದೆ ದಿನದೂಡುತ್ತಿದೆ.

ಅರಿಹಾ ತಂದೆ ಕೆಲಸದ ವೀಸಾದಲ್ಲಿ ಯುರೋಪಿಯನ್ ರಾಷ್ಟ್ರವಾದ ಜರ್ಮನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅರಿಹಾಳ ಅಜ್ಜಿ 2021ರ ಸೆಪ್ಟೆಂಬರ್‌ನಲ್ಲಿ ಆಕಸ್ಮಿಕವಾಗಿ ಮಗುವಿಗೆ ನೋವುಂಟು ಮಾಡಿದ್ದರು ಎನ್ನುವ ಕಾರಣಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೆ ನೆಪವಾಗಿಸಿಕೊಂಡ ಅಲ್ಲಿನ ಮಕ್ಕಳ ರಕ್ಷಣಾ ಸಂಸ್ಥೆಯ ಅಧಿಕಾರಿಗಳು ಮಗುವಿನ ವಿರುದ್ಧ ಲೈಂಗಿಕ ದೌರ್ಜನ್ಯವನ್ನು ಆರೋಪಿಸಿ ಆಕೆಯನ್ನು ಬಲವಂತವಾಗಿ ಹೆತ್ತವರ ಕೈಯಿಂದ ಕಿತ್ತುಕೊಂಡು ಮಕ್ಕಳ ಆರೈಕಾ ಕೇಂದ್ರದಲ್ಲಿ ಇಟ್ಟಿದ್ದಾರೆ. ಅರಿಹಾ ಆರು ತಿಂಗಳ ಕೂಸಾಗಿದ್ದು, ಆಕೆ ತಾಯಿ ಹಾಲಿನ ಮೇಲೆ ನಿರ್ಭರಳಾಗಿದ್ದರೂ ಮಗುವನ್ನು ಹೆತ್ತವರಿಂದ ದೂರವಿಟ್ಟು ಕಳೆದ 1.5 ವರ್ಷದಿಂದ ಮಗುವನ್ನು ಹಿಂತಿರುಗಿಸದೆ ಸತಾಯಿಸುತ್ತಿದ್ದಾರೆ ಎಂದು ಆಕೆಯ ಪೋಷಕರು ಹೇಳಿದ್ದಾರೆ.

Image

ಬರ್ಲಿನ್ ಚೈಲ್ಡ್ ಸರ್ವಿಸಸ್ ಪೋಷಕರ ಹಕ್ಕುಗಳನ್ನು ಕೊನೆಗೊಳಿಸಲು ನಾಗರಿಕ ಪಾಲನೆ ಪ್ರಕರಣವನ್ನು ದಾಖಲಿಸಿದೆ. ಅರಿಹಾ ಪೋಷಕರು ಜರ್ಮನಿಯಲ್ಲಿ ಪ್ರಕರಣದ ವಿರುದ್ಧ ಹೋರಾಡುತ್ತಿದ್ದಾರೆ, ಆದರೆ ಮಕ್ಕಳ ಕಾನೂನಿನ “ನಿರಂತರತೆಯ” ಲಾಭ ಪಡೆಯಲು ಸಂಸ್ಥೆಯು ಪ್ರಕರಣವನ್ನು ಎಳೆಯುತ್ತಿದೆ. ಈ ಕಾನೂನಿನ ಅಡಿಯಲ್ಲಿ ಮಗುವು ರಾಜ್ಯದಿಂದ ನೇಮಿಸಲ್ಪಟ್ಟ ಆರೈಕೆದಾರರೊಂದಿಗೆ ಗಮನಾರ್ಹ ಸಮಯವನ್ನು ಕಳೆದಿದ್ದರೆ, ಮಗು ಅಲ್ಲಿಯೇ ನೆಲೆಸಬೇಕಾಗುತ್ತದೆ. ಸೂಕ್ತ ಎಂದು ಕಂಡುಬಂದರೂ ಕೂಡಾ ಪೋಷಕರಿಗೆ ಮಗುವನ್ನು ಮರಳಿ ಕೊಡುವಂತಿಲ್ಲ.

ಜರ್ಮನಿಯ ಈ ಮಾನವಾಧಿಕಾರ ಹನನದ ಬಗ್ಗೆ ಭಾರತದಾದ್ಯಂತ ಕಳೆದ 1.5 ವರ್ಷಗಳಿಂದ ನಿರಂತರ ಹೋರಾಟಗಳಾಗುತ್ತಿವೆ. ಮಗುವಿನ ಹೆತ್ತವರು ಭಾರತ ಸರಕಾರದ ಸಹಾಯವನ್ನೂ ಬೇಡಿದ್ದು, ಡಿಸೆಂಬರ್ 2022 ರಲ್ಲಿ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅರಿಹಾ ಪ್ರಕರಣದ ಬಗ್ಗೆ ಮಾತನಾಡಿದ್ದರು. “ಅರಿಹಾ ಶಾ ಎಂಬ ಮಗುವಿಗೆ ಸಂಬಂಧಿಸಿದ ಪ್ರಕರಣವಿದೆ. ಅವಳು ತನ್ನ ಭಾಷಾ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಸರದಲ್ಲಿ ಬೆಳೆಯಬೇಕು ಎಂದು ನಾವು ಕಾಳಜಿ ವಹಿಸುತ್ತೇವೆ. ಇದು ಅವಳ ಹಕ್ಕು” ಎಂದು ಜೈಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಈ ಹಿಂದೆ ನಾರ್ವೆಯಲ್ಲಿಯೂ ಸಾಗರಿಕಾ ಮತ್ತು ಅನುರೂಪ್ ಭಟ್ಟಾಚಾರ್ಯ ಎನ್ನುವ ಬೆಂಗಾಲಿ ದಂಪತಿಗಳ ಇಬ್ಬರು ಮಕ್ಕಳನ್ನೂ ಇದೇ ರೀತಿ ಸುಳ್ಳು ಕಾರಣಗಳನ್ನು ನೀಡಿ ಅಲ್ಲಿನ ಮಕ್ಕಳ ರಕ್ಷಣಾ ಸಂಸ್ಥೆಯು ಬಲವಂತವಾಗಿ ಕಿತ್ತುಕೊಂಡಿತ್ತು.

ಇದೀಗ ಜರ್ಮನ್ ಛಾನ್ಸೆಲರ್ ಓಲಾಫ್ ಸ್ಕೋಲ್ಜ್ ಎರಡು ದಿನದ ಭೇಟಿಗಾಗಿ ಶನಿವಾರದಂದು ಭಾರತಕ್ಕೆ ಬರಲಿದ್ದು ಭಾರತ ಸರ್ಕಾರ ಅರಿಹಾ ವಿಷಯ ಪ್ರಸ್ತಾಪ ಮಾಡಲಿದೆಯೆ ಎನ್ನುವುದು ಸ್ಪಷ್ಟವಿಲ್ಲ. ಟ್ವಿಟರ್ ನಲ್ಲಿ ಬಾಯ್ಕಾಟ್ ಜರ್ಮನಿ ಟ್ರೆಂಡ್ ಆಗುತ್ತಿದ್ದು, ಅರಿಹಾ ನನ್ನು ಆಕೆಯ ಹೆತ್ತವರಿಗೆ ವಾಪಾಸು ನೀಡುವಂತೆ ಒತ್ತಾಯಿಸಲಾಗುತ್ತಿದೆ. ಕೆಲಸದ ನಿಮಿತ್ತ ಯೂರೋಪ್ ದೇಶಗಳಿಗೆ ಹೋಗುವವರು ಈ ಎರಡು ಪ್ರಕರಣಗಳಿಂದ ಪಾಠ ಕಲಿಯಬೇಕು ಎನ್ನುವ ಹಿತನುಡಿಗಳು ಕೂಡಾ ಕೇಳಿಬರುತ್ತಿವೆ.