ಉಡುಪಿ: ಫೆಬ್ರವರಿ 21 ರಂದು ಜರುಗಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ ತಾಲ್ಲೂಕು ಯೋಜನಾ ಶಾಖೆಗಳ ಚುನಾಯಿತ ಪ್ರತಿನಿಧಿಗಳ ಹಾಗೂ ವೃಂದ ಸಂಘಗಳ ಅಧ್ಯಕ್ಷರು-ಪದಾಧಿಕಾರಿಗಳ “ತುರ್ತುರಾಜ್ಯಕಾರ್ಯಕಾರಿಣಿ ಸಭೆ” ಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಪಡಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ದಿನಾಂಕ: 01-03-2023 ರಿಂದ ‘ಅನಿರ್ಧಿಷ್ಟಾವಧಿ ಮುಷ್ಕರ’ಕ್ಕೆ ಕರೆ ನೀಡಲು 8000 ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯದ 2023-24ನೇ ಸಾಲಿನ ಆಯ-ವ್ಯಯದಲ್ಲಿ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಸಹಜವಾಗಿಯೇ ನೌಕರರಲ್ಲಿ ನಿರಾಶೆ ಮೂಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು ದಿನಾಂಕ: 01-07-2022ರಿಂದ ಜಾರಿಗೊಳಿಸಬೇಕಾಗಿತ್ತು.
ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರವು ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗವನ್ನು ರಚಿಸಿದ್ದು, ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ಸಿದ್ದಪಡಿಸಿ ಸಲ್ಲಿಸಿತ್ತು.
ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ
ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ, ನ್ಯಾಯ ಸಮ್ಮತ ಹಕ್ಕಾಗಿದ್ದು, ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೌಕರರು ಕುಟುಂಬ ನಿರ್ವಹಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ನೌಕರರ ವೇತನ ಪರಿಷ್ಕರಣೆ ಮಾಡಿ ಆರ್ಥಿಕ ವ್ಯತ್ಯಾಸಗಳನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದಾಗ್ಯೂ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಭೆಯು ಒಕ್ಕೊರಲಿನಿಂದ ಅಸಮ್ಮತಿ ವ್ಯಕ್ತಪಡಿಸಿ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿ ದಿನಾಂಕ: 01-03-2023 ರಿಂದ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ
‘ಅನಿರ್ಧಿಷ್ಟಾವಧಿ ಮುಷ್ಕರ’ ಕ್ಕೆ ಕರೆ ನೀಡಲು ನಿರ್ಣಯ ಕೈಗೊಂಡಿದೆ.
ಸಂಘದ ಪ್ರಮುಖ ಬೇಡಿಕೆಗಳು: ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ
ನೌಕರರಿಗೆದಿನಾಂಕ:01-07-2022 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹರಾಗಿದ್ದು, 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40% ಫಿಟ್‌ಮೆಂಟ್ ಸೌಲಭ್ಯವನ್ನು ದಿನಾಂಕ: 01-07-2022ರಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸುವುದು.
ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್‌ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.
ಆದ್ದರಿಂದ ದಿನಾಂಕ: 01-03-2023 ರಿಂದ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ‘ಅನಿರ್ಧಿಷ್ಟಾವಧಿ ಮುಷ್ಕರ’ವನ್ನು ಬೆಂಬಲಿಸುವುದೊಂದರಿಗೆ ಯಶಸ್ವಿಗೊಳಿಸಲು ಜಿಲ್ಲಾ, ತಾಲ್ಲೂಕು, ಯೋಜನಾ ಶಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ-ನೌಕರರಲ್ಲಿ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಆಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.