ಭಾವನೆಗಳ ಅಭಿವ್ಯಕ್ತಿಗೆ ಮಾತೃಭಾಷೆ ಸೂಕ್ತ: ಪ್ರೊ. ಪಿ. ಗಿರಿಧರ ಕಿಣಿ

ಮಣಿಪಾಲ: ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆಯಂಥ ಸೂಕ್ತ ಮಾಧ್ಯಮ ಮತ್ತೊಂದಿಲ್ಲ. ಪ್ರಸ್ತುತ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲೆಯ ಬೋಧನಾ ವಿಧಾನಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಬಹುಭಾಷೆಯಲ್ಲಿ ಶಿಕ್ಷಣ ಒದಗಿಸುವ ಧ್ಯೇಯದೊಂದಿಗೆ ಆಚರಿಸುವ ಸಂಕಲ್ಪವನ್ನು ಯುನೆಸ್ಕೋ ಹೊಂದಿದೆ. ಈ ದಿನದಂದು ಸಾಹಿತ್ಯ- ಕಲೆಗಳಿಗೆ ಸಂಬಂಧಿಸಿದ ಅಂತರ್‌ಶಿಸ್ತೀಯ ಮಹತ್ತ್ವದ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿರುವುದು ಅರ್ಥಪೂರ್ಣ ಎಂದು ಮಣಿಪಾಲ್‌ ಅಕಾಡೆಮಿ ಹೈಯರ್ ಎಜುಕೇಶನ್‌ನ ರಿಜಿಸ್ಟ್ರಾರ್‌ ಪ್ರೊ. ಪಿ. ಗಿರಿಧರ ಕಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಹೆಯ ಭಾಷಾ ವಿಭಾಗ ಹಾಗೂ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರವು ವಿಶ್ವ ಮಾತೃಭಾಷಾ ದಿನ-2023 ರ ಸಂದರ್ಭದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು.

ಖ್ಯಾತ ಛಾಯಾಚಿತ್ರಗ್ರಾಹಕ ಆಸ್ಟ್ರೋಮೋಹನ್‌ ‘ಬೆಳಕಿನ ಭಾಷೆ’ಯ ಮೂಲಕ ಅಭಿವ್ಯಕ್ತಿಸಿದ
ಛಾಯಾಚಿತ್ರಗಳ ಪ್ರದರ್ಶನ ‘ಕನ್ನಡ ಶಾಲೆ’ಯನ್ನು ಫೊಟೊ ಕ್ಲಿಕ್ಕಿಸುವುದರ ಮೂಲಕ ಅವರು ಅನಾವರಣಗೊಳಿಸಿ ಮಾತನಾಡಿ, ಕನ್ನಡ ಶಾಲೆ ಎಂಬುದನ್ನು ಕಲ್ಪಿಸಿಕೊಂಡಾಗ ನೂರಾರು ಚಿತ್ರಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಮಾತೃಭಾಷೆಯಾದ ಕನ್ನಡದಲ್ಲಿ ಕಲಿಯುತ್ತಿರುವ ಶಾಲೆಗಳಿಗೆ ಅವುಗಳದೇ ಆದ ವಿಶಿಷ್ಟತೆ ಇದೆ. ಕನ್ನಡ ಶಾಲೆಗೆ ಸಂಬಂಧಿಸಿದ ಛಾಯಾಚಿತ್ರಗಳು ವಿಶ್ವ ಮಾತೃಭಾಷಾ ದಿನದ ಸಂದರ್ಭದಲ್ಲಿ ಅಪೂರ್ವ ದಾಖಲಾತಿಗಳೆನಿಸಿಕೊಳ್ಳುತ್ತವೆ. ಶಿಕ್ಷಣದ ಕುರಿತ ಸಂಶೋಧನೆಗೂ ಆಕರಗಳೆನಿಸುತ್ತವೆ ಎಂದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ‘ಕನ್ನಡ ಶಾಲೆ’ ಛಾಯಾಚಿತ್ರಗ್ರಹಣದ ಕುರಿತ ಸಂವಾದದಲ್ಲಿ ಭಾಗವಹಿಸಿದರು.

ಕನ್ನಡ ಮತ್ತು ಪ್ರಾದೇಶಿಕ ಭಾಷಾ ಕೇಂದ್ರದ ಸಂಯೋಜಕ ಡಾ. ಪೃಥ್ವೀರಾಜ ಕವತ್ತಾರು ಅತಿಥಿಗಳನ್ನು ಪರಿಚಯಿಸಿದರು. ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌ನ ಪ್ರಧಾನ ಸಂಪಾದಕಕಿ ಪ್ರೊ. ನೀತಾ ಇನಾಂದಾರ್‌ , ಭಾಷಾ ವಿಭಾಗದ ಮುಖ್ಯಸ್ಥ ಪ್ರೊ ರಾಹುಲ್‌ ಪುಟ್ಟಿ , ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ್‌ ಎನ್‌. ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಸ್ಪ್ಯಾನಿಶ್‌ ಭಾಷಾ ಉಪನ್ಯಾಸಕಿ ಮೇಘನಾ ಮಂಗಲ್‌ವೇಢೆ ನಿರೂಪಿಸಿದರು. ಭಾಷಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ‘ಪೊಯೆ-ಟ್ರಿ ’ ಎಂಬ ವಿಶಿಷ್ಟ ಕನ್ನಡ ಮತ್ತು ಯುರೋಪಿಯನ್‌ ಭಾಷೆಗಳ ಅನುವಾದಿತ ಕಾವ್ಯಗಳನ್ನು ಪ್ರಸ್ತುತಪಡಿಸಿದರು.