ಫೆ.23 ರಿಂದ 26 ರವರೆಗೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ರೇಸಿಂಗ್

ಮಂದಾರ್ತಿ: ಡ್ರ್ಯಾಗನ್‌ ಬೋಟ್‌ ಮತ್ತು ಕಯಾಕಿಂಗ್‌ ಅಸೋಸಿಯೇಶನ್‌ ಆಶ್ರಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ 11ನೇ ಡ್ರ್ಯಾಗನ್ ಬೋಟ್ ರೇಸಿಂಗ್ ಬ್ರಹ್ಮಾವರ ಸಮೀಪದ ಹೇರೂರು ಸೇತುವೆ ಬಳಿಯ ಮಡಿಹೊಳೆಯಲ್ಲಿ ಫೆ.23 ರಿಂದ 26ರವರೆಗೆ ನಡೆಯಲಿದೆ. ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡ್ರ್ಯಾಗನ್ ಬೋಟ್ ರೇಸ್ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ 18 ರಾಜ್ಯಗಳಿಂದ 18 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, 700ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಜೇತರು ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಶಾಸಕ ಕೆ. ರಘುಪತಿ ಭಟ್ ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೇರೂರು ಸ್ವರ್ಣಾ ನದಿ ಸೇತುವೆಯ ತೀರದಲ್ಲಿ ಫೆ. 23 ರಂದು ಸಂಜೆ 4ಗಂಟೆಗೆ ಸ್ಪರ್ಧೆಯ ಉದ್ಘಾಟನೆಯು ನಡೆಯಲಿದ್ದು, ಹಿರಿಯರ, ಕಿರಿಯರ(ಪುರುಷರು, ಮಹಿಳೆಯರು, ಮಿಶ್ರ) ಸಹಿತ 18 ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಹಿರಿಯ ಮತ್ತು ಕಿರಿಯ ಪುರುಷರು ಮತ್ತು ಮಹಿಳೆಯರಿಗೆ 200 ಮೀ., 500 ಮೀ. ಮತ್ತು 2000 ಮೀ. ವಿಭಾಗದಲ್ಲಿ ಸ್ಪರ್ಧೆ ನಡೆಯಲಿವೆ. ಈಗಾಗಲೇ ರಾಜ್ಯದ ತಂಡಗಳು ತರಬೇತಿ ನಡೆಸುತ್ತಿದ್ದಾರೆ. ಸ್ಥಳೀಯ ಯುವಕ/ಯುವತಿಯರಿಗೆ ಮತ್ತು ಅಗ್ನಿಪಥ್‌ ತರಬೇತಿ ಪಡೆದ ಯುವಕರಿಗೂ ಈ ಕ್ರೀಡೆಯ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದೆ.

ಉಡುಪಿ ಜಿಲ್ಲೆಗೆ ಡ್ರ್ಯಾಗನ್ ಬೋಟ್ ಹಾಗೂ ಕಯಾಕಿಂಗ್ ರಾಷ್ಟ್ರೀಯ ತರಬೇತುದಾರರು ಬಂದು ತರಬೇತಿ ನೀಡಿದ್ದು, ಆರು ತಂಡಗಳನ್ನು ರಚಿಸಲಾಗಿದೆ. ಫೆ. 23ರಿಂದ ನಡೆಯುವ ಸ್ಪರ್ಧೆಯಲ್ಲಿ ದೇಶದ 16 ತಂಡಗಳ 635 ಮಂದಿ ಡ್ರ್ಯಾಗನ್ ಬೋಟ್ ಆಟಗಾರರು ಹಾಗೂ 26 ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಫೆ.21ರಿಂದ 22ರವರೆಗೆ ಜಿಲ್ಲಾಮಟ್ಟ ಪಂದ್ಯಾವಳಿ ನಡೆದಿದ್ದು, ಫೆ.23 ರಿಂದ 26ರತನಕ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆಯಲಿದೆ.