ಉಡುಪಿ: ಈಡಿಗ-ಬಿಲ್ಲವ ಸೇರಿ 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ‘ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿ ಆದೇಶ ಹೊರಡಿಸುವ ಮೂಲಕ ನುಡಿದಂತೆ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಭಿನಂದನೆ ಸಲ್ಲಿಸಿದೆ.
ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ದೊರಕಿರುವ ಹಿನ್ನೆಲೆಯಲ್ಲಿ ಬಿಲ್ಲವ, ಈಡಿಗ ಸಹಿತ 26 ಜಾತಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಸವಲತ್ತುಗಳ ಜೊತೆಗೆ ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಅನೇಕ ವರ್ಷಗಳಿಂದ ಕೇಳಿ ಬಂದಿರುವ ನಿಗಮದ ಬೇಡಿಕೆ ಈಡೇರಿದಂತಾಗಿದೆ.
ಈ ಪ್ರಕ್ರಿಯೆಯಿಂದ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ‘ಸಂಘಟನೆಯಿಂದ ಬಲಯುತರಾಗಿರಿ; ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ’ ಎಂಬ ದಿವ್ಯ ಸಂದೇಶವನ್ನು ಸಮಾಜದಲ್ಲಿ ಇನ್ನಷ್ಟು ಪ್ರಚಲಿತಗೊಳಿಸಲು ಹೊಸ ಚೈತನ್ಯ ತುಂಬಿದಂತಾಗಿದೆ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಗಾಣಿಗ ಮತ್ತಿತರ ಸಂಬಂಧಿತ ಸಮುದಾಯಗಳ ಅಭಿವೃದ್ಧಿಗಾಗಿ ‘ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ’ ಸ್ಥಾಪನೆಗೂ ಆದೇಶಿಸಿರುವುದು ಸ್ವಾಗತಾರ್ಹ. ಈ ಮೂಲಕ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಸಹಿತ ವಿವಿಧ ಸಮುದಾಯಗಳ ಸಮಗ್ರ ಅಭಿವೃದ್ಧಿಯ ಕಾಳಜಿಯ ಬದ್ಧತೆಯನ್ನು ಪ್ರದರ್ಶಿಸಿದೆ ಎಂದಿದ್ದಾರೆ.
ಅಭಿವೃದ್ದಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರಾವಳಿಯ ಸಚಿವರುಗಳು, ಸಂಸದರು, ಶಾಸಕರು, ಸಮುದಾಯಗಳ ಸ್ವಾಮೀಜಿಗಳು, ಪ್ರಮುಖರು ಹಾಗೂ ಸಮುದಾಯದ ಅವಿರತ ಪ್ರಯತ್ನ ಪ್ರಶಂಸನೀಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












