ಉಡುಪಿ: ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೋಮವಾರದಂದು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಪವಿತ್ರ ಕೃಷ್ಣಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ಆಶೀರ್ವಾದ ಪಡೆದು ಮಾತು ಆರಂಭಿಸುತ್ತಿದ್ದೇನೆ. ಉಡುಪಿಗೆ ಭಾರತೀಯ ಜನತಾ ಪಕ್ಷದಲ್ಲಿ ವಿಶೇಷ ಸ್ಥಾನವಿದೆ. 1968ರಲ್ಲಿ ಬಾರಿಗೆ ಉಡುಪಿ ನಗರಸಭೆ ಭಾರತೀಯ ಜನ ಸಂಘದ ತೆಕ್ಕೆಗೆ ಬಂದಿದ್ದು, ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲ ಅರಳಲು ಸಾಧ್ಯವಾಗಿತ್ತು.1968ರಲ್ಲಿ ವಿಎಸ್ ಆಚಾರ್ಯ ಅವರು ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದು, ನಂತರ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವಿಎಸ್.ಆಚಾರ್ಯ ಅವರು ನನ್ನ ಗೆಳೆಯ, ಸಹೋದ್ಯೋಗಿ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಅವರೊಬ್ಬ ಜನಪರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು ಎಂದರು.
ಕರ್ನಾಟಕದಲ್ಲಿ ನಾವು ಹಲವು ಬಾರಿ ವಿಪಕ್ಷದಲ್ಲಿದ್ದರೂ ಇದೀಗ ನಮ್ಮ ಪಕ್ಷ ಆಡಳಿತ ನಡೆಸುತ್ತಿದೆ. ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಭಾಷೆಯಲ್ಲಿ ವ್ಯತ್ಯಾಸ ಇರಬಹುದು. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ದುಡಿಯುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ಭಾವಿಸುತ್ತೇನೆ ಎಂದು ನಡ್ಡಾ ಹೇಳಿದರು.
ಹಲವು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ, ಒಂದು ಸಿದ್ಧಾಂತವನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಉಳಿದ ಪಕ್ಷಗಳೆಲ್ಲವೂ ಕುಟುಂಬ ರಾಜಕಾರಣ ಪಕ್ಷಗಳಾಗಿವೆ. ಕಾಂಗ್ರೆಸ್ ನಲ್ಲಿ ಅಮ್ಮ, ಮಗ, ಮಗಳ ಆಡಳಿತ, ಶಿವಸೇನಾ, ಮಮತಾ, ಬಿಜು ಪಟ್ನಾಯಕ್, ತೆಲಂಗಾಣದ ಟಿಆರ್ ಎಸ್, ಡಿಎಂಕೆ, ಜೆಡಿಎಸ್, ವೈಎಸ್ ಆರ್ ಕಾಂಗ್ರೆಸ್ ಎಲ್ಲವೂ ಪರಿವಾರದ ಪಕ್ಷಗಳಾಗಿವೆ. ಬಿಜೆಪಿ ಮಾತ್ರ ಸಿದ್ಧಾಂತದ, ಕಾರ್ಯಕರ್ತರನ್ನೊಳಗೊಂಡ ಪಕ್ಷವಾಗಿದ್ದು, ಬಿಜೆಪಿ ಪಕ್ಷವೇ ಒಂದು ಪರಿವಾರವಾಗಿದೆ ಎಂದು ನಡ್ಡಾ ಪ್ರತಿಪಾದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ಸಮಾವೇಶಕ್ಕೆ ಆಗಮಿಸಿದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಇಂಧನ ಸಚಿವ ಸುನೀಲ್ ಕುಮಾರ್, ಮೀನುಗಾರಿಕೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಶಾಸಕ ರಘುಪತಿ ಭಟ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಶ್ರೀನಿವಾಸ್ ಪೂಜಾರಿ, ಪ್ರಮೋದ್ ಮಧ್ವರಾಜ್, ಯಶ್ ಪಾಲ್ ಸುವರ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.