ಮಣಿಪಾಲ: ತಿರುಮಲೇಶರನ್ನು ತಿಳಿಯೋಣ- ಒಂದು ನೆನಪು ಕಾರ್ಯಕ್ರಮ

ಮಣಿಪಾಲ: ಹೆಸರಾಂತ ಕವಿ-ವಿಮರ್ಶಕ-ಲೇಖಕ ಪ್ರೊ.ಕೆ.ವಿ.ತಿರುಮಲೇಶ್ ಅವರು ವಾಸ್ತವಿಕ ಪ್ರಪಂಚ ಮತ್ತು ಪ್ರಜ್ಞಾ ಪ್ರಪಂಚದ ನಡುವಿನ ಕೊಂಡಿಯಾಗಿರುವ ಭಾಷೆಯ ಬಗ್ಗೆ ಅತೀವ ಕಾಳಜಿ ವಹಿಸಿದ್ದರು ಮತ್ತು ತತ್ತ್ವಶಾಸ್ತ್ರವು ಅವರ ಚಿಂತನಾ ಪ್ರಕ್ರಿಯೆಯ ಆಧಾರ ಎಂದು ಹಿರಿಯ ವಿಮರ್ಶಕರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಕೇಂದ್ರದ ಗೌರವ ನಿರ್ದೇಶಕ ಪ್ರೊ.ಎಸ್.ಆರ್.ವಿಜಯಶಂಕರ್ ಅಭಿಪ್ರಾಯಪಟ್ಟರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ನಡೆದ ‘ತಿರುಮಲೇಶರನ್ನು ತಿಳಿಯೋಣ: ಒಂದು ನೆನಪು’ ಕಾರ್ಯಕ್ರಮದಲ್ಲಿ ತಿರುಮಲೇಶ್ ಕುರಿತು ಮಾತನಾಡಿದ ಪ್ರೊ.ವಿಜಯಶಂಕರ್, ದಿವಂಗತರು ತಮ್ಮ ತಾತ್ವಿಕ ಅನ್ವೇಷಣೆಯಲ್ಲಿ ಬೇರೂರಿದ್ದರು ಹಾಗೂ ಅಸ್ತಿತ್ವವಾದದತ್ತ ಒಲವು ಹೊಂದಿದ್ದರು. ಹೈಡೆಗ್ಗರ್ ಅವರ ‘ಬೀಯಿಂಗ್ ಇನ್ ದಿ ವರ್ಲ್ಡ್’ ತತ್ವವು ಅವರ ಅಸ್ತಿತ್ವವಾದದ ಅನ್ವೇಷಣಾ ಕೇಂದ್ರವಾಗಿತ್ತು ಎಂದು ಅವರು ನುಡಿದರು.

ಪ್ರೊ.ತಿರುಮಲೇಶ್ ಅವರು ಕವನ, ಸಣ್ಣ ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ಅಂಕಣ ಬರಹ ಮುಂತಾದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಪ್ರಯೋಗ ನಡೆಸಿದ್ದಾರೆ ಮತ್ತು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅವರ ಭಾಷಾ ಅಧ್ಯಯನದ ಕುರಿತ ಪಾಂಡಿತ್ಯಪೂರ್ಣ ಬರಹಗಳನ್ನು ಒಟ್ಟುಗೂಡಿಸಿ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಮಾತನಾಡಿದ ಪ್ರೊ.ವಿಜಯಶಂಕರ್, ತಿರುಮಲೇಶ್ ಒಮ್ಮೆ ಆಯುಧಗಳು ಸುಸಂಸ್ಕೃತವಾಗಲು ಸಾಧ್ಯವಿಲ್ಲ ಎಂಬ ತರ್ಕದಲ್ಲಿ’ಸಿವಿಲೈಸ್ಡ್ ವೆಪನ್ಸ್’ ಪದದ ಬದಲಾಗಿ ‘ಪಾಲಿಶ್ಡ್ ವೆಪನ್ಸ್’ ಎಂಬ ಪದ ಪ್ರಯೋಗಿಸಿದ್ದು ಸೇರಿದಂತೆ ಮತ್ತಿತರ ಸಂದರ್ಭಗಳನ್ನು ನೆನೆದು ಅವರು ಭಾಷೆಯ ಬಳಕೆಯಲ್ಲಿ ಬಹಳ ಸಂವೇದನಾಶೀಲರಾಗಿದ್ದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಪ್ರೊ.ತಿರುಮಲೇಶ್ ಅವರ ವಿದ್ವತ್ಪೂರ್ಣ ಲೇಖನಗಳನ್ನು ಪುಸ್ತಕಗಳಾಗಿ ಹೊರತಂದು ಭಾಷಾಂತರಿಸುವ ಅಗತ್ಯವಿದೆ ಮತ್ತು ಅವರ ಜೀವಿತ ಕಾಲದಲ್ಲಿ ನಡೆದ ಅಧ್ಯಯನಕ್ಕಿತಲೂ ಹೆಚ್ಚಿನ ಅಧ್ಯಯನವನ್ನು ಮರಣೋತ್ತರವಾಗಿ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ತಿರುಮಲೇಶ್ ಅವರ ವಿದ್ಯಾರ್ಥಿ ಪ್ರೊ.ನೇಮಿರಾಜ್ ಶೆಟ್ಟಿ, ದಿವಂಗತ ಕವಿಯ ಕುಟುಂಬದ ಸದಸ್ಯರು, ಅವರ ಅನೇಕ ಅಭಿಮಾನಿಗಳು ಮತ್ತು ಜಿಸಿಪಿಎಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.