ಬೆಳ್ಮಣ್: ಶಿರ್ವ ಗ್ರಾಮ ಪಂಚಾಯಿತಿಗೆ ಎರಡನೆ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ತುಂಬಾ ಸಂತಸದ ವಿಚಾರ. ಈ ಹಿಂದೆ 2020 ರಲ್ಲಿ ಶಿರ್ವ ಗ್ರಾಮ ಪಂಚಾಯಿತಿಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಾರಿಜಾ ಪೂಜಾರಿ ಹಾಗೂ ಉಪಾಧ್ಯಕ್ಷ ದೇವದಾಸ್ ನಾಯಕ್ ಅವಧಿಯಲ್ಲಿ ಗಾಂಧಿ ಗ್ರಾಮ ಗೌರವಕ್ಕೆ ಪಾತ್ರವಾಗಿದೆ. ವಾರಿಜಾ ಪೂಜಾರಿಯವರ ಅಧಿಕಾರಾವಧಿಯಲ್ಲಿ ಶಿರ್ವ ಗ್ರಾಮ ಪಂಚಾಯತ್ ಸ್ವಚ್ಛತೆಯನ್ನು ಪಾಲಿಸುವ ಸಲುವಾಗಿ ವಿಶೇಷ ಗಮನ ಹರಿಸಿ ಸಮಗ್ರವಾಗಿ ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಣೆ ಮಾಡಲು ಎಸ್. ಎಲ್.ಆರ್.ಎಂ.ಘಟಕ ವನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ಸಲ್ಲುತ್ತದೆ. ಅಲ್ಲದೇ, ಪ್ರತಿನಿತ್ಯ ಕೇವಲ ಒಂದೇ ಕಸ ಸಂಗ್ರಹಿಸುವ ವಾಹನ ಹಾಗೂ ನಿಯಮಿತ ಸ್ವಚ್ಛತಾ ಸಿಬಂದಿಗಳಿದ್ದರೂ ಬಹಳ ಉತ್ತಮ ರೀತಿಯಲ್ಲಿ ಕಸ ವಿಲೇವಾರಿಯ ಕೆಲಸವನ್ನೂ ನಿರ್ವಹಿಸಲಾಗುತ್ತಿದೆ.
ಹಿಂದೆಲ್ಲಾ ಶಿರ್ವ ಬಸ್ಸು ತಂಗುದಾಣ ಹಾಗೂ ಪೇಟೆಯ ಸುತ್ತಮುತ್ತಲಿನಲ್ಲಿ ಕಸದ ರಾಶಿ ಕೊಳೆತು ಗಬ್ಬು ನಾರುತ್ತಿತ್ತು. 2020 ರಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ದೊರಕುವಲ್ಲಿ ಶಿರ್ವಾ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಇವರ ಶ್ರಮವನ್ನು ಮರೆಯುವಂತಿಲ್ಲ.ಅವರ ಮೊದಲ ಆದ್ಯತೆ ಸ್ವಚ್ಛತೆಯ ಕಡೆಗೆ ಇತ್ತು. ಇದರೊಂದಿಗೆ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಸಹಕಾರ ಸ್ವಚ್ಛತಾ ಸಿಬ್ಬಂದಿಗಳ ಶ್ರಮವನ್ನು ಮರೆಯುವಂತಿಲ್ಲ. ಪ್ರಸ್ತುತ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರವು ದೊರೆಯಲು ಈ ಹಿಂದೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಆಡಳಿತಾವಧಿಯಲ್ಲಿ ಹಾಕಿದ ಭದ್ರಬುನಾದಿಯೇ ಮೂಲ ಕಾರಣವಾಗಿದೆ ಎಂಬುದನ್ನು ಗ್ರಾಮಸ್ಥರು ಎಂದಿಗೂ ಮರೆಯುವಂತಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರವೀಂದ್ರ ಪಾಟ್ಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.












