ಮಣಿಪಾಲ: ಸರಿಯಾದ ತಂಡದ ಸಹಾಯದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಬಾಲ್ಯದ ಹೆಚ್ಚಿನ ಕ್ಯಾನ್ಸರ್ ಗಳನ್ನು ಗುಣಪಡಿಸಬಹುದು. ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳು, ಅವರ ಆರೈಕೆ ಮಾಡುವವರು ಮತ್ತು ಕ್ಯಾನ್ಸರ್ ನಿಂದ ಬದುಕುಳಿದವರಿಗೆ ಬೆಂಬಲ ವ್ಯಕ್ತಪಡಿಸಲು ಜಾಗತಿಕವಾಗಿ ಪ್ರತಿ ವರ್ಷ ಫೆಬ್ರವರಿ 15 ರಂದು ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನವನ್ನು (ಐ ಸಿ ಸಿ ಡಿ ) ಆಚರಿಸಲಾಗುತ್ತದೆ. “ಉತ್ತಮ ಬದುಕುಳಿಯುವಿಕೆ ನಿಮ್ಮ ಮೂಲಕ ಸಾಧಿಸಬಹುದಾಗಿದೆ” ಎಂಬುದು ಐ ಸಿ ಸಿ ಡಿ ಯ ಮೂರು ವರ್ಷಗಳ ಧ್ಯೇಯ ವಾಕ್ಯವಾಗಿದ್ದು, ಇದು ಈ ಅಭಿಯಾನದ ಮೂರನೇ ವರ್ಷವಾಗಿದೆ.
ಮಣಿಪಾಲದ ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಕ್ಯಾನ್ಸರ್ ಇರುವ ಯಾವುದೇ ಮಗು ಚಿಕಿತ್ಸೆ ಇಲ್ಲದೆ ಹೋಗಬಾರದು ಈ ನಿಟ್ಟಿನಲ್ಲಿ ಕೆಎಂಸಿ, ಮಣಿಪಾಲವು ಶ್ರಮಿಸುತ್ತಿದೆ ಎಂದು ಹೇಳಿದರು.
ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ವರ್ಮಾ ಟಿ ಅವರು ತಮ್ಮ ಅವಲೋಕನದಲ್ಲಿ, ಕ್ಯಾನ್ಸರ್ ಹೊಂದಿರುವ ಮಕ್ಕಳಲ್ಲಿ ಸಮಗ್ರ ಚಿಕಿತ್ಸಾ ಆರೈಕೆ ವಿಧಾನದಲ್ಲಿ ಗರಿಷ್ಠ ಸಾಧನೆ ಸಾಧಿಸಲು ಬಹಳಷ್ಟು ಜನರು ಕೈಜೋಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಜೀತ್ ಅಸೋಸಿಯೇಷನ್ ಫಾರ್ ಸಪೋರ್ಟ್ ಆಫ್ ಕ್ಯಾನ್ಸರ್ ಪೇಶೆಂಟ್ (ಜಸ್ಕ್ಯಾಪ್ JASCAP) ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿ.ಗಣಪತಿ, ಬಾಲ್ಯದ ರಕ್ತದ ಕ್ಯಾನ್ಸರ್ಗಳ ಕುರಿತಾದ ಮಾಹಿತಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ರೋಗದ ಕುರಿತು ವಿವರವಾದ ಮಾಹಿತಿಯನ್ನು ಆರೈಕೆ ಮಾಡುವವರಿಗೆ ಚೆನ್ನಾಗಿ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು ಎಂದರು.
ಮಾಹೆ ಮಣಿಪಾಲದ ಮಾಜಿ ಉಪಕುಲಪತಿ ಡಾ.ರಾಜ್ ವಾರಿಯರ್ ಮಾತನಾಡಿ, ಕಳೆದ ಕೆಲವು ದಶಕಗಳಲ್ಲಿ ಬಾಲ್ಯದ ಕ್ಯಾನ್ಸರ್ಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಯುತ್ತಿರುವುದರಿಂದ, ಕಾಯಿಲೆಯಿಂದ ಬದುಕುಳಿಯುವಲ್ಲಿ ಮಹತ್ತರವಾದ ಸುಧಾರಣೆ ಕಂಡುಬಂದಿದೆ ಮತ್ತು ಬೆಂಬಲದ ಆರೈಕೆಯು ಚಿಕಿತ್ಸೆಯ ಪ್ರಮುಖ ಅಂಶವಾಗಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಮತ್ತು ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ವಾಸುದೇವ ಭಟ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿಭಾಗದ ಸಾಮಾಜಿಕ ಸೇವಾ ಕಾರ್ಯಕರ್ತೆ ವಾಣಿಶ್ರೀ ನಿರೂಪಿಸಿದರು.
ಬೋಧನಾ ಆಸ್ಪತ್ರೆಗಳ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಮತ್ತು ಕೆ ಎಂ ಸಿ ಮಣಿಪಾಲದ ಸಹ ಡೀನ್ ಡಾ ಕೃಷ್ಣಾನಂದ ಪ್ರಭು ಉಪಸ್ಥಿತರಿದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಡಾ.ಪಿ.ಸುಬಾ ಸೂರಿಯಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳು ಮತ್ತು ಅವರ ಪಾಲಕರಿಗೆ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.