ಪ್ರಾಣಿಗಳ ಕಳೇಬರ ವಿಲೇವಾರಿಗೆ ಮೊಬೈಲ್ ಚಿತಾಗಾರ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ: ಜಿಲ್ಲೆಯಲ್ಲಿ ಅನಾಥವಾಗಿ ಸಾವಿಗೀಡಾಗುವ ಪ್ರಾಣಿಗಳ ಕಳೇಬರವನ್ನು ಪರಿಸರ ಸ್ವೀಕಾರ್ಹವಾಗಿ ವಿಲೇವಾರಿ ಮಾಡಲು ಮೊಬೈಲ್ ಚಿತಾಗಾರ ವ್ಯವಸ್ಥೆಗಳನ್ನು ಮಾಡುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ನಿರ್ದೇಶನ ನೀಡಿದರು.

ಅವರು ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಬದಿಯಲ್ಲಿ ಅಪಘಾತಕ್ಕೀಡಾಗಿ ಮತ್ತು ಇತರೆ ಕಾರಣಗಳಿಂದಾಗಿ ಸಾವಿಗೀಡಾಗುವ ಪ್ರಾಣಿಗಳ ಕಳೇಬರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ ಎಂಬ ಪ್ರಾಣಿ ಪ್ರಿಯರ ದೂರುಗಳಿಗೆ ಸಂಬಂಧಿಸಿದಂತೆ, ಪ್ರಾಣಿಗಳ ಕಳೇಬರವನ್ನು ವಿಲೇವಾರಿ ಮಾಡಲು ಮೊಬೈಲ್ ಚಿತಾಗಾರದ ವ್ಯವಸ್ಥೆ ಮಾಡಲು ಅಗತ್ಯ ಪ್ರಸ್ತಾವನೆಯನ್ನು ಪಶುಪಾಲನಾ ಇಲಾಖೆಯಲ್ಲಿ ಸಲ್ಲಿಸುವಂತೆ ಹಾಗೂ ಕಳೇಬರವನ್ನು ದಫನ ಮಾಡು ಸೂಕ್ತ ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಗೋಶಾಲೆಗಳಲ್ಲಿ ಸಾಕಷ್ಟು ಪ್ರಮಾಣದ ಮೇವು ಮತ್ತು ನೀರು ಸಂಗ್ರಹ ಇರುವಂತೆ ನೋಡಿಕೊಳ್ಳಿ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಪ್ರಾಣಿಗಳ ರಕ್ಷಣೆಗೆ ಪ್ರಾಣಿ ಸ್ವಯಂ ಸೇವಕರು ಹಾಗೂ ಪ್ರಾಣಿ ರಕ್ಷಕರನ್ನು ನೇಮಿಸುವಂತೆ ಮತ್ತು ಜಿಲ್ಲೆಯಲ್ಲಿ ಪ್ರಾಣಿಗಳ ಮಾರಾಟ ಮಳಿಗೆ, ನಾಯಿ ಸಂವರ್ಧನೆ ಕೇಂದ್ರಗಳನ್ನು ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ. ಶಂಕರ್ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ, ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.