ಬೆಂಗಳೂರು: “ಈ ತಿಂಗಳು ಜಿಎಸ್ಟಿ ಅಡಿಯಲ್ಲಿ 6085 ಕೋಟಿ ದಾಖಲೆ ಸಂಗ್ರಹವಾಗಿದೆ. ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು 30% ರಷ್ಟು ಅತ್ಯಧಿಕ ಬೆಳವಣಿಗೆ ದರವನ್ನು ಹೊಂದಿರುವ ರಾಜ್ಯವಾಗಿ ಮುಂದುವರೆದಿದೆ.
ಸುಧಾರಣೆಗಳು, ಕೇಂದ್ರೀಕೃತ ಜಾಗರೂಕತೆ, ಆರ್ಥಿಕತೆಯಲ್ಲಿ ಚೇತರಿಕೆ ಮತ್ತು ತೆರಿಗೆ ಪಾವತಿದಾರರಿಂದ ಉತ್ತಮ ಅನುಸರಣೆಗಾಗಿ ಕೈಗೊಂಡ ಕ್ರಮಗಳಿಂದಾಗಿ ಈ ಗಮನಾರ್ಹ ಸಂಗ್ರಹಣೆ ಆಗಿದೆ. ಆದಾಯದ ಈ ಹೆಚ್ಚಳವು ಈ ವರ್ಷ ಉತ್ತಮ ಬಜೆಟ್ ಅನ್ನು ಮಂಡಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಜಿ.ಎಸ್.ಟಿ ಸಂಗ್ರಹಣೆ ಹೆಚ್ಚಿರುವಂತೆ ರಾಜ್ಯದ ಸಾಲದ ಪ್ರಮಾಣವೂ ಕೂಡಾ ದುಪ್ಪಟ್ಟಾಗಿದೆ. ರಾಜ್ಯ ಸಭೆಯ ಲಿಖಿತ ಉತ್ತರದಲ್ಲಿ 2018 ರಲ್ಲಿ 2.45 ಲಕ್ಷ ಕೋಟಿ ಇದ್ದ ಸಾಲ 2022 ಮಾರ್ಚ್ ಅಂತ್ಯಕ್ಕೆ 4.73 ಲಕ್ಷ ಕೋಟಿಗೆ ಏರಿದ್ದು, 2025-26 ನೇ ಆರ್ಥಿಕ ವರ್ಷಕ್ಕೆ ಸಾಲದ ಮೊತ್ತ 7,38,510 ಕೋಟಿ ತಲುಪಲಿದೆ ಎಂದು ಕರ್ನಾಟಕ ಹಣಕಾಸು ಇಲಾಖೆ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಅಂದಾಜು ಮಾಡಿದೆ.
2022- 023 ನೇ ಆರ್ಥಿಕ ವರ್ಷದಲ್ಲಿ ಸಾಲದ ಪ್ರಮಾಣ 60,334 ಕೋಟಿಯಷ್ಟು ಹೆಚ್ಚಲಿದ್ದು, 5,18,366 ಕೋಟಿ ತಲುಪಲಿದೆ. ಮುಂದಿನ ನಾಲ್ಕು ವರ್ಷ ಸರ್ಕಾರದ ಒಟ್ಟು ಸಾಲದ ಮೊತ್ತವು ರಾಜ್ಯದ ಜಿ.ಡಿ.ಪಿಯ ಶೇ 26.61 ರಷ್ಟಿದ್ದು, ಮುಂದಿನ ವರ್ಷದಿಂದ ಗಣನೀಯ ಏರಿಕೆಯಾಗಲಿದ್ದು, 2025 ರಲ್ಲಿ ಶೇ 27.55 ರಷ್ಟಾಗಲಿದೆ ಎಂದು ಆರ್ಥಿಕ ಇಲಾಖೆ ಅಂದಾಜಿಸಿದೆ.