ಕುಂದಾಪುರ: ದೇಶ ಇಂದು ಒಳ್ಳೆಯ ನಾಯಕರು, ಅಧಿಕಾರಿಗಳ ಬರುವಿಕೆಯನ್ನು ಕಾಯುತ್ತಿದೆ. ನಮ್ಮ ದೇಶಕ್ಕೆ ಜನರ ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಅಧಿಕಾರಿಗಳ ಅಗತ್ಯ ಇದೆ. ಸಮಾನತೆ ಮತ್ತು ಪ್ರಜಾಪ್ರಭುತ್ವ ತತ್ವಗಳಿಗೆ ಬೆಲೆ ಕೊಡುವ ಜಾತಿ, ಧರ್ಮ ಮೀರಿ ಕೆಲಸ ಮಾಡಿ ದೇಶದ ಏಳಿಗೆಗಾಗಿ ಪ್ರಯತ್ನಿಸುವ ಯುವಕರ ಅಗತ್ಯತೆ ಈ ದೇಶಕ್ಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ| ಪಿ.ಎಲ್ .ಧರ್ಮಾ ಹೇಳಿದರು.
ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಪ್ರೊ. ಎ. ಪಿ. ಮಿತ್ತಂತ್ತಾಯರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಗಳಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೊಲೊಮನ್ ಸೋನ್ಸ್, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ ಭಾಂಡ್ಯ, ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಡಾ | ಬಿ. ಬಿ. ಹೆಗ್ಡೆ ಕಾಲೇಜಿನ ನಿರ್ದೇಶ ಪ್ರೊ. ಚಂದ್ರಶೇಖರ್ ದೋಮಾ, ಎಚ್ಎಮ್ಎಮ್ ಹಾಗೂ ವಿಕೆಆರ್ ಆಂಗ್ಲ ಮಾಧ್ಯಮ ಸಂಸ್ಥೆಯ ಪ್ರಾಂಶುಪಾಲೆ ಚಿಂತನಾ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಧಕ ಕ್ರೀಡಾಪಟುಗಳಾದ ಪವನ್. ಎನ್. ಪೂಜಾರಿ, ಭರತ್ ಹಾಗೂ ಶ್ರೇಯಸ್ ಅವರನ್ನು ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಕುಮಾರ್ ಶೆಟ್ಟಿಯವರು ವಾರ್ಷಿಕ ವರದಿಯನ್ನು ವಾಚಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಅಭಿನಂದನಾ ಪತ್ರವನ್ನು ವಾಚಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಿ.ಬಿ.ಕೃಷ್ಣಮೂರ್ತಿ ವಂದಿಸಿದರು ದ್ವಿತೀಯ ಪಿಯುಸಿ ವಿನಾಯಕ್ ಮತ್ತು ಅಕೇಶಿಯಾ ಕಾರ್ಯಕ್ರಮ ನಿರೂಪಿಸಿದರು.