ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಅಂಗವಾಗಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಮತದಾನ ಜಾಗೃತಿಯ ಕುರಿತ ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಿರುಚಿತ್ರದ ಅವಧಿಯು 30 ಸೆಕೆಂಡ್‌ಗಳಿಂದ ಗರಿಷ್ಠ 1 ನಿಮಿಷದ ಒಳಗಿರಬೇಕು. ವಿಷಯವು ಮತದಾರರಿಗೆ ತಮ್ಮ ಮತದ ಬಗ್ಗೆ ಹಾಗೂ ಮತದಾನ ಮಾಡಲು ಅರಿವು ಮೂಡಿಸುವಂತಿರಬೇಕು. ವೀಡಿಯೋ ಹಾಗೂ ಧ್ವನಿ ಉತ್ತಮವಾಗಿರಬೇಕು ಹಾಗೂ ವಿಷಯಕ್ಕೆ ತಕ್ಕಂತೆ ವೇಷಭೂಷಣವಿರಬೇಕು. ಕಿರುಚಿತ್ರವು ರಾಜಕೀಯ ವ್ಯಕ್ತಿ, ಪಕ್ಷ, ಚಿಹ್ನೆ, ಅಭ್ಯರ್ಥಿಯ ಕುರಿತು ವಿಷಯ ಹಾಗೂ ದೃಶ್ಯವನ್ನು ಒಳಗೊಂಡಿರಬಾರದು. ಯಾವುದೇ ಧಾರ್ಮಿಕ ಸ್ಥಳಗಳನ್ನು ಚಿತ್ರದಲ್ಲಿ ಬಳಸುವಂತಿಲ್ಲ ಹಾಗೂ ಸಂಭಾಷಣೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಿರಬಾರದು. ಮಾತುಗಳು ಸಕಾರಾತ್ಮಕವಾಗಿದ್ದು, ಕಲಾವಿದರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು.
ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ಆಸಕ್ತರಿಗೆ ಮುಕ್ತ ಅವಕಾಶವಿದ್ದು, ಕಿರುಚಿತ್ರವನ್ನು ಕನ್ನಡ, ತುಳು ಹಾಗೂ ಆಂಗ್ಲ ಭಾಷೆಯಲ್ಲಿ ನಿರ್ಮಿಸಬಹುದಾಗಿದ್ದು, ಕಿರುಚಿತ್ರವನ್ನು ಫೆಬ್ರವರಿ 20 ರ ಒಳಗೆ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿಯ ಸ್ವೀಪ್ ವಿಭಾಗಕ್ಕೆ ಸಲ್ಲಿಸಬಹುದಾಗಿದೆ.
ಕಿರುಚಿತ್ರವು ಸ್ವಂತದ್ದಾಗಿದ್ದು, ನಕಲು ಕಿರುಚಿತ್ರಗಳನ್ನು ಸಲ್ಲಿಸುವಂತಿಲ್ಲ. ಕಾಪಿರೈಟ್ ಆಕ್ಟ್ ಉಲ್ಲಂಘನೆ ಆಗುವಂತಹ, ಬ್ಯಾಗ್ರೌಂಡ್ ಮ್ಯೂಸಿಕ್ ಇನ್ನಿತರ ಆಡಿಯೋ ಅಥವಾ ವೀಡಿಯೋ ಅಳವಡಿಸಿರುವ ಕಿರುಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ. ಕಿರುಚಿತ್ರ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಹೆಸರು, ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.