ಪುತ್ತೂರು: ಫೆ. 11 ರಂದು ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮ ತೆಂಕಿಲ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ, ರಾಜ್ಯ ಮುಖ್ಯ ಮಂತ್ರಿ ಬಸವ ರಾಜ್ ಬೊಮ್ಮಾಯಿ, ಮುಖಂಡರಾದ ಪ್ರಹ್ಲಾದ ಜೋಷಿ, ಕಲ್ಲಡ್ಕ ಪ್ರಭಾಕರ ಭಟ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರಿ ಸಚಿವ ಸೋಮಶೇಖರ್, ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಮೀನುಗಾರಿಕಾ ಸಚಿವ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಸಂಸದರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೊಸದಾಗಿ ಅವಿಷ್ಕಾರಗೊಂಡಿರುವ ಕೃಷಿ ಯಂತ್ರಗಳು ಹಾಗೂ ಕೃಷಿಗೆ ಸಂಬಂಧಿಸಿದ ನೂತನ ತಂತ್ರಜ್ಞಾನಗಳ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ರೈತರಿಗೆ ಒದಗಿಸುವ ಉದ್ದೇಶದಿಂದ 3 ದಿನಗಳ ಕೃಷಿ ಯಂತ್ರ ಮೇಳವನ್ನು ನೆಹರು ನಗರದ ವಿವೇಕಾನಂದ ಇಂಜಿನೀಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಫೆ. 10 ರಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ದಿ. ವಾರಣಾಸಿ ಸುಬ್ರಾಯ ಭಟ್ ಅವರ ಕನಸಿನ ಸಂಸ್ಥೆಯಾದ ಕ್ಯಾಂಪ್ಕೋದ ಆಶೋತ್ತರಗಳಿಗೆ ಸರಿಯಾಗಿ ಆಡಳಿತ ಮಂಡಳಿ ಕೆಲಸ ನಿರ್ವಹಿಸುತ್ತಿದೆ. ನಿಖರ ಹಾಗೂ ಸ್ಥಿರ ಧಾರಣೆ ನೀಡುವ ಕಾರ್ಯವನ್ನು ಕ್ಯಾಂಪ್ಕೋ ಪ್ರಾಮಾಣಿಕವಾಗಿ ಮಾಡುತ್ತಿದೆ. ಸುವರ್ಣ ಮಹೋತ್ಸವದ ಮಾಹಿತಿಯನ್ನು ಕ್ಯಾಂಪ್ಕೋ ಸದಸ್ಯ ಬೆಳೆಗಾರರಿಗೆ ಎಲ್ಲಾ ಶಾಖೆಗಳ ಮೂಲಕ ನೀಡುವ ಕಾರ್ಯ ಮಾಡಲಾಗುತ್ತಿದೆ.
ಮುಂದಿನ 5 ವರ್ಷಗಳಲ್ಲಿ ಚಾಕಲೇಟ್ ಕಾರ್ಖಾನೆಯಲ್ಲಿ ೧೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಯಂತ್ರೋಪಕರಣ ಬದಲಾವಣೆಯ ಯೋಜನೆ ಇದೆ. ಸುವರ್ಣಮಹೋತ್ಸವದ ಸಂದರ್ಭಲ್ಲಿ ಸದಸ್ಯರ ಠೇವಣಿಗೆ ಶೇ.9 ಬಡ್ಡಿಯನ್ನು ನೀಡುವ ಬಗ್ಗೆ ನಿರ್ಣಯ ಮಾಡಲಾಗಿದೆ. ಮಂಗಳೂರಿನ ಹಳೆ ಕಟ್ಟಡ ತೆಗೆದು 25 ಕೊಟಿ ರೂ ವೆಚ್ಚದ ನೂತನ ಎಗ್ರಿಮಾಲ್ ನ ಶಂಕುಸ್ಥಾಪನೆ, ಭದ್ರಾವತಿಯಲ್ಲಿ 2.20 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾದ ನೂತನ ಗೋದಾಮಿನ ಉದ್ಘಾಟನೆ, ಕ್ಯಾಂಪ್ಕೋ ಬ್ರಾಂಡ್ ನ ತೆಂಗಿನೆಣ್ಣೆಯ 500 ಎಂ. ಎಲ್. ನ ವಿಶೇಷ ಪೊಟ್ಟಣ ಬಿಡುಗಡೆ ನಡೆಯಲಿದೆ ಎಂದರು.
ಯಂತ್ರಮೇಳದ ಸಂಯೋಜಕ ರವಿ ಕೃಷ್ಣ ಡಿ.ಕಲ್ಲಾಜೆ ಮಾತನಾಡಿ ಕೃಷಿ ಯಂತ್ರಗಳಿಗೆ ಸಂಬಂಧಿಸಿದ 140 ಮಳಿಗೆಗಳು, ಕನಸಿನ ಮನೆಗೆ ಸಂಬಂಧಪಟ್ಟ 83 ಮಳಿಗೆಗಳಿರಲಿದೆ. 10 ಅಟೋಮೊಬೈಲ್, 4 ನರ್ಸರಿ, 20 ಆಹಾರ ಮಳಿಗೆಗಳು ಮತ್ತು 20 ವ್ಯಾಪಾರ ಮಳಿಗೆಗಳು ಇರಲಿವೆ. ಸರ್ಕಾರದ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು, ಬ್ಯಾಂಕ್ ಸಾಲ ಲಭ್ಯತೆಯ ಮಾಹಿತಿ ಮಳಿಗೆ, ಪಾರಂಪರಿಕ ಮಾದರಿ ಗ್ರಾಮ, ಕ್ಯಾಂಪ್ಕೋ ಸಂಸ್ಥೆಯು ನಡೆದು ಬಂದ ದಾರಿಯನ್ನು ಪ್ರತಿಬಿಂಬಿಸುವ ವಿಶೇಷ ಮಳಿಗೆ ಹಾಕಲಾಗುವುದು. ಮೇಳದಲ್ಲಿ ಕೃಷಿ ಗೋಷ್ಠಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಯಂತ್ರಮೇಳಕ್ಕೆ ಆಗಮಿಸುವ ಕೃಷಿಕರಿಗಾಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಆಪ್ ಅವಿಷ್ಕಾರ ಮಾಡಿದ್ದು, ವೆಬ್ ಪೇಜ್ ಕೂಡಾ ಸಿದ್ದಪಡಿಸಲಾಗಿದ್ದು ಅದರಲ್ಲಿ ವರ್ಚ್ಯುವಲ್ ಟೂರಿಂಗ್ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಈ ವೆಬ್ ಸೈಟಿನಲ್ಲಿ ಮಳಿಗೆಗಳ ಸಮಗ್ರ ಮಾಹಿತಿಯನ್ನು ಡಿಜಿಟಲ್ ತಂತ್ರಜ್ಜಾನದ ಮೂಲಕ ಒದಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಮಳಿಗೆಗಳಿಂದ ಉತ್ಪನ್ನ ಖರೀದಿಸುವವರಿಗೆ ಇದು ಕೈಪಿಡಿ ಮಾದರಿಯಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್.ಎಮ್.ಕೃಷ್ಣಕುಮಾರ್, ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ದಯಾನಂದ ಹೆಗ್ಡೆ, ರಾಘವೇಂದ್ರ ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್ ಟಿ. ಎಸ್ ಉಪಸ್ಥಿತರಿದ್ದರು.