ಪ್ರಥಮ ಯಕ್ಷಗಾನ ಸಮ್ಮೇಳನಕ್ಕೆ ಭರದ ಸಿದ್ದತೆ: ರಘುಪತಿ ಭಟ್

ಉಡುಪಿ: ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯುವ ಪ್ರಥಮ ಯಕ್ಷಗಾನ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಅವರು ಇಂದು ಎಂಜಿಎಂ ಮೈದಾನದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಚಪ್ಪರ ಮಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಮ್ಮೇಳನಕ್ಕೆ ಉಡುಪಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಲಾಗಿದ್ದು, ಯಕ್ಷಗಾನ ಕಲಾವಿದರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎರಡು ದಿನ ನಡೆಯುವ ಈ ಸಮ್ಮೇಳನಕ್ಕೆ ಪ್ರಧಾನ ವೇದಿಕೆ ಮತ್ತು ಎರಡು ಉಪ ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಯಕ್ಷ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಕಲಾವಿದರು ಭಾಗವಹಿಸಲಿದ್ದಾರೆ. ಯಕ್ಷಗಾನ ಕಲೆಯು ಕರಾವಳಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಉದ್ದಗಲಕ್ಕೂ ಇದರ ಪರಿಚಯ ಆಗಬೇಕೆನ್ನುವ ಉದ್ದೇಶವನ್ನು ಸಮ್ಮೇಳನ ಹೊಂದಿದ್ದು ಯಕ್ಷಗಾನ ಆಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿ ಯಕ್ಷಗಾನದ ಸಂಪೂರ್ಣ ವಿವರಗಳನ್ನು ಪಡೆಯಬಹುದಾಗಿದೆ. ಸಮ್ಮೇಳನದಲ್ಲಿ ಆಸಕ್ತರು ಯಕ್ಷಗಾನದ ವೇಷ ಧರಿಸಿ ಸೆಲ್ಫಿ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.

ಸಮ್ಮೇಳನಕ್ಕೆ ಸುಮಾರು 4 ಕೋಟಿ ರೂ ವೆಚ್ಚವಾಗಲಿದ್ದು, ಸರ್ಕಾರದಿಂದ 2 ಕೋಟಿ ರೂ ಗಳ ಬಿಡುಗಡೆಗೆ ಆದೇಶ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ. ಎಲ್. ಹೆಗಡೆ ಮಣಕಿ, ರಿಜಿಸ್ಟ್ರಾರ್ ಶಿವರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಶ್ರೀನಿವಾಸ ಹೆಬ್ಬಾರ್, ಮೇಳಗಳ ಸಂಚಾಲಕ ಕಿಶನ್ ಹೆಗ್ಡೆ, ಸುರೇಂದ್ರ ಪಣಿಯೂರು, ಭುವನ ಪ್ರಸಾದ್ ಹೆಗ್ಡೆ, ಎಸ್. ವಿ. ಭಟ್, ಡಾ. ಜಗದೀಶ್ ಶೆಟ್ಟಿ, ಕೆ. ರಾಘವೇಂದ್ರ ಕಿಣಿ ಮತ್ತಿತರರು ಉಪಸ್ಥಿತರಿದ್ದರು.