ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಸುಪ್ರಸಿದ್ಧ ಸಂಸ್ಥೆಯಾಗಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾಗಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಜನವರಿ 12ರಂದು ‘ರಾಷ್ಟ್ರೀಯ ಯುವ ದಿನಾಚರಣೆ’ ಪ್ರಯುಕ್ತ ಪ್ರಾರಂಭಿಸಿರುವ ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ದ ಎರಡನೇ ಮೇಳವು ಇದೇ ಫೆಬ್ರವರಿ 9, ಗುರುವಾರದಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿದೆ.
ಈಗಾಗಲೇ ಈ ಮೇಳದಲ್ಲಿ ಭಾಗವಹಿಸಲು 20ಕ್ಕೂ ಹೆಚ್ಚಿನ ಕಂಪನಿಗಳು, ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಬ್ಯಾಂಕಿಂಗ್, ಐಟಿ, ಐಟಿಇಎಸ್, ಹಾಸ್ಪಿಟಾಲಿಟಿ, ರಿಟೇಲ್, ಆಟೋಮೊಬೈಲ್, ಇನ್ಶುರೆನ್ಸ್ ಹೀಗೆ ವಿವಿಧ ಕ್ಷೇತ್ರಗಳ ಕಂಪೆನಿಗಳು ಅಭ್ಯರ್ಥಿಗಳನ್ನು ನೇರ ಹಾಗೂ ಆನ್ ಲೈನ್ ಸಂದರ್ಶನದ ಮೂಲಕ ಆಯ್ಕೆಮಾಡಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಹಾಗೂ ಉದ್ಯೋಗದಾತರು www.unnathijobs.com ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಫೆಬ್ರವರಿ 7ರಂದು ಅಭ್ಯರ್ಥಿಗಳಿಗೆ ಸಂದರ್ಶನ ಎದುರಿಸುವ ಬಗ್ಗೆ ತಜ್ಞರಿಂದ ಉಚಿತ ತರಬೇತಿಯನ್ನೂ ಆಯೋಜಿಸಲಾಗಿದೆ.
ಸಂಸ್ಥೆಯ ಈ ಕಾರ್ಯಕ್ಕೆ “ಸಂಚಲನ” ಸ್ವಯಂ ಸೇವಾ ಸಂಘಟನೆಯು ಸಂಪೂರ್ಣ ಸಹಕಾರ ನೀಡುತ್ತಿದ್ದು, ಯಾವುದೇ ರೀತಿಯ ಶುಲ್ಕವಿಲ್ಲದೇ ಜಿಲ್ಲೆಯ ಹಾಗೂ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸಂಪೂರ್ಣ ಉಚಿತವಾಗಿ ಉದ್ಯೋಗ ದೊರಕಿಸಿ ಕೊಡುವ ಪ್ರಯತ್ನ ನಮ್ಮದು ಎಂದು ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಹಾಗೂ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.












