ಚಿತ್ರಗಳಲ್ಲಡಗಿದೆ ಕನ್ನಡದ ಅಕ್ಷರಮಾಲೆ: ಸೃಜನಶೀಲ ಕಲಿಕಾ ವಿಧಾನ ಎಂದ ಪ್ರಧಾನಿ ಮೋದಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಕಲಿಕೆಯ ಬಗ್ಗೆ ಕನ್ನಡಿಗರಲ್ಲೇ ನಿರುತ್ಸಾಹ ಕಂಡುಬರುತ್ತಿದೆ. ಚಿಕ್ಕ ಮಕ್ಕಳಿಗಂತೂ ಇವತ್ತು ಕನ್ನಡವೆಂದರೆ ಕಬ್ಬಿಣದ ಕಡಲೆಯಂತಾಗಿದೆ. ಇಂಗ್ಲೀಷ್ ಭಾಷಾ ವ್ಯಾಮೋಹದಿಂದಾಗಿ ಕನ್ನಡ ನಿರಂತರ ಸೊರಗುತ್ತಿದೆ. ಈ ಮಧ್ಯೆ ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ವಿನೂತನ ವಿಧಾನದಲ್ಲಿ ಕನ್ನಡದ ಅಕ್ಷರಮಾಲೆಯನ್ನು ಕಲಿಸಬಹುದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ.

” 49 ರಲ್ಲಿ 46 ಅಕ್ಷರಗಳು ಚಿತ್ರಗಳ ಸುಳಿವುಗಳನ್ನು ಹೊಂದಿವೆ. ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಕಲಿಸುವ ಅದ್ಭುತ ವಿಧಾನ. (ಆದರೂ ನನಗೆ ಇದರ ರಚನಕಾರರು ಗೊತ್ತಿಲ್ಲ) ನೀವು ಎಷ್ಟನ್ನು ಊಹಿಸಬಹುದು? 40 ಕ್ಕಿಂತ ಕಡಿಮೆಯಿದ್ದರೆ, ಚಿಂತಿಸಲು ಪ್ರಾರಂಭಿಸಿ” ಎಂದು ಕಿರಣ್ ಕುಮಾರ್ ಎಸ್ ಬರೆದುಕೊಂಡಿದ್ದಾರೆ.

Image

ಇದನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಭಾಷೆಗಳನ್ನು ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡುವ ಸೃಜನಶೀಲ ವಿಧಾನ, ಈ ಸಂದರ್ಭದಲ್ಲಿ ಸುಂದರ ಕನ್ನಡ ಭಾಷೆ” ಎಂದು ಬರೆದಿದ್ದಾರೆ.

ಸೃಜನಶೀಲ ಕಲಿಕಾ ವಿಧಾನಗಳನ್ನು ಬಳಸುವ ಮೂಲಕ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಉತ್ಸಾಹವನ್ನು ಮೂಡಿಸಬಹುದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.