ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: 70 ಕ್ಕೂ ಹೆಚ್ಚು ಜನರ ಸಾವು; ಅಪಾರ ಆಸ್ತಿ ಹಾನಿ

ಸೈಪ್ರಸ್: ಸೋಮವಾರದಂದು 7.8 ತೀವ್ರತೆಯ ಪ್ರಬಲ ಭೂಕಂಪವು ಏಳು ಟರ್ಕಿಶ್ ಪ್ರಾಂತ್ಯಗಳಲ್ಲಿ 70 ಕ್ಕೂ ಹೆಚ್ಚು ಜನರ ಸಾವಿಗೆ ಮತ್ತು ಸೈಪ್ರಸ್, ಲೆಬನಾನ್ ಮತ್ತು ಸಿರಿಯಾದಲ್ಲಿ ಡಜನ್ ಗಟ್ಟಲೆ ಕಟ್ಟಡಗಳ ಕುಸಿತಕ್ಕೆ ಕಾರಣವಾಗಿದೆ. ಭೂಕಂಪದಲ್ಲಿ 500 ಕ್ಕೂ ಮಿಕ್ಕಿ ಜನರು ಗಾಯಾಳುಗಳಾಗಿದ್ದಾರೆ ಎಂದು ವರದಿಯಾಗಿದೆ.

ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯವು ಸಮರೋಪಾದಿಯಲ್ಲಿ ನಡೆಯುತ್ತಿದೆ.

ಸಿರಿಯಾದ ಸರ್ಕಾರಿ ಸ್ವಾಮ್ಯದ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ 111 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸಿರಿಯನ್ ಮಾಧ್ಯಮಗಳು ತಿಳಿಸಿವೆ. ಇದಲ್ಲದೆ, ಸಿರಿಯಾದಲ್ಲಿ ಕನಿಷ್ಠ 334 ಜನರು ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಸಿರಿಯಾದ ಬಂಡುಕೋರರ ಹಿಡಿತದಲ್ಲಿ 20 ಮಂದಿ ಮೃತಪಟ್ಟಿದ್ದರು. ಇದು ಟರ್ಕಿ ಮತ್ತು ಸಿರಿಯಾದಲ್ಲಿ ಒಟ್ಟಾರೆ ಸಾವಿನ ಸಂಖ್ಯೆಯನ್ನು 207 ಕ್ಕೆ ಏರಿಸಿದೆ.

ಟರ್ಕಿಯ ಜನರೊಂದಿಗೆ ಭಾರತವು ಒಗ್ಗಟ್ಟಿನಲ್ಲಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. “ಟರ್ಕಿಯಲ್ಲಿ ಭೂಕಂಪದಿಂದಾಗಿ ಜೀವಹಾನಿ ಮತ್ತು ಆಸ್ತಿ ಹಾನಿಯಿಂದ ದುಃಖವಾಗಿದೆ. ಮೃತ ಕುಟುಂಬಗಳಿಗೆ ಸಂತಾಪ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಭಾರತವು ಟರ್ಕಿಯ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ ಮತ್ತು ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.

ಸಿರಿಯನ್ ಗಡಿಯಿಂದ ಸುಮಾರು 90 ಕಿಲೋಮೀಟರ್ (60 ಮೈಲುಗಳು) ಗಜಿಯಾಂಟೆಪ್ ನಗರದ ಉತ್ತರಕ್ಕೆ ಕೇಂದ್ರೀಕೃತವಾಗಿದ್ದ ಭೂಕಂಪದ ಕಂಪನವು ಕೈರೋದವರೆಗೆ ಭಾಸವಾಗಿದೆ ಎಂದು ವರದಿ ಹೇಳಿವೆ.