ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ನಿತ್ಯಸತ್ಯ-ಬಾಳಿಗೆ ಬೆಳಕು ಕೃತಿ ಲೋಕಾರ್ಪಣೆ

ಉಡುಪಿ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ, ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ `ನಿತ್ಯ ಸತ್ಯ-ಬಾಳಿಗೆ ಬೆಳಕು’ ಕೃತಿಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ರಂಗಭೂಮಿ ಉಡುಪಿಯ ಎರಡನೇ ದಿನದ ರಂಗೋತ್ಸವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಾವು ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದೇವೆ. ಜೀವನದಲ್ಲಿ ನೆಮ್ಮದಿ ಕಡಿಮೆಯಾಗುತ್ತಿದೆ. ಹೀಗಾಗಿ ಬದುಕಿಗೆ ದಾರಿ ದೀಪವಾಗಬಲ್ಲ ಭಗವದ್ಗೀತೆ, ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಮೊದಲಾದ ಕೃತಿಗಳನ್ನು ಓದುತ್ತಾ ನೆಮ್ಮದಿಯ ಹುಡುಕಾಟ ನಡೆದಿದೆ. 1000ದಷ್ಟು ಲೋಕೋಕ್ತಿಗಳನ್ನು ಹೊಂದಿರುವ ಈ ಕೃತಿ ಜನರ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು.

ಡಾ.ತಲ್ಲೂರು ಶಿವರಾಮ ಶೆಟ್ಟರದ್ದು ಬಹುಮುಖ ಪ್ರತಿಭೆ. ಜಾನಪದ ಹಾಗೂ ಯಕ್ಷಗಾನಕ್ಕೆ ಹೆಚ್ಚಿನ ಮನ್ನಣೆ ಕೊಟ್ಟವರು. ಸ್ವತ: ಗೆಜ್ಜೆಕಟ್ಟಿ ಯಕ್ಷಗಾನದಲ್ಲಿ ಕುಣಿದವರು. ಪುಸ್ತಕಗಳನ್ನು ಬರೆದು ಸಮಾಜಕ್ಕೆ ಪಥ ದೀಪಕರಾವದರು. ತಾನು ಬೆಳೆಯುತ್ತಾ, ಇತರರನ್ನು ಬೆಳೆಸುತ್ತಿರುವ ಅವರಿಂದ ಸಮಾಜೋಪಯೋಗಿ ಇನ್ನಷ್ಟು ಕಾರ್ಯಗಳು ನಡೆಯಲಿ ಎಂದರು.

ಕೃತಿಕಾರ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಸಮಾಜದ ಅದರಲ್ಲೂ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ಹಲವಾರು ಕೃತಿಗಳನ್ನು ಬರೆದು ಪ್ರಕಟಿಸಿ, ಅವುಗಳನ್ನು ನಾಡಿನ ನೂರಾರು ಶಾಲಾ ಕಾಲೇಜುಗಳಿಗೆ ತೆರಳಿ 30,000ಕ್ಕೂ ಆಧಿಕ ಪ್ರತಿಗಳನ್ನು ಉಚಿತವಾಗಿ ಹಂಚಿದ್ದೇನೆ. ನನ್ನ ಈ ಹಿಂದಿನ ಕೃತಿ `ಧರ್ಮಂಚರ -ನಿತ್ಯ ಸತ್ಯಗಳು ‘ ಕೃತಿ ಹೆಚ್ಚಿನ ಜನಮನ್ನಣೆಗಳಿಸಿದ್ದು, ಆ ಪ್ರೇರಣೆಯಿಂದಲೇ ಈ ಕೃತಿಯನ್ನು ಓದುಗರ ಮುಂದಿಡುತ್ತಿದ್ದೇನೆ ಎಂದರು.

ಲಯನ್ಸ್ ಜಿಲ್ಲೆ 317ಸಿಯ ಮಾಜಿ ಗವರ್ನರ್ ಎನ್.ಎಂ.ಹೆಗ್ಡೆ ಕೃತಿ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಮಾಹೆ ವಿವಿಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಗಿರಿಜಾ ಶಿವರಾಮ ಶೆಟ್ಟಿ, ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಹಿರಿಯ ಸಹಕಾರಿ ಧುರೀಣ ಟಿ.ಶಂಭು ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಡಾ.ಆರ್.ಎನ್.ಭಟ್, ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಿ.ಶ್ರೀಧರ ಶೇಣವ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಖಜಾಂಚಿ ಜಯರಾಮ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಗೋಪಾಲ ಸಿ.ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಜಾನಪದ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ನಿರೂಪಿಸಿದರು. ಅಮಿತಾಂಜಲಿ ಕಿರಣ್ ವಂದಿಸಿದರು.