ಪನ್ನಾ: 14 ವರ್ಷಗಳ ಹಿಂದೆ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ತಂದ ಮೊದಲ ಹುಲಿ ‘ಟಿ-1’ ತನ್ನ ಸುದೀರ್ಘ ಪಯಣವನ್ನು ಮುಗಿಸಿ, ಕೊನೆಯುಸಿರೆಳೆದಿದೆ. 2009 ರಲ್ಲಿ ವಿಶೇಷ ಯೋಜನೆಯಡಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಪಿಟಿಆರ್) ತರಲಾದ ಮೊದಲ ಹುಲಿ ಟಿ-1 ಒಟ್ಟು 13 ಮರಿಗಳಿಗೆ ಜನ್ಮ ನೀಡಿತ್ತು.
ಮಧ್ಯಪ್ರದೇಶದಲ್ಲಿ ಹುಲಿಗಳ ಮರುಪರಿಚಯ ಯೋಜನೆಯಡಿ 14 ವರ್ಷಗಳ ಹಿಂದೆ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಿಂದ ಈಕೆಯನ್ನು ಇಲ್ಲಿಗೆ ಕರೆತರಲಾಗಿತ್ತು. ಆಕೆ 13 ಮರಿಗಳಿಗೆ ಜನ್ಮ ನೀಡಿದ್ದು, ಇದೀಗ ಪನ್ನಾ ಹುಲಿ ಸಂರಕ್ಷಿತ ಪ್ರದೇಶ ಮತ್ತೊಮ್ಮೆ ಹುಲಿಗಳ ವಾಸಸ್ಥಾನವಾಗುವಲ್ಲಿ ಆಕೆಯ ಸಹಯೋಗ ದೊಡ್ಡದಿದೆ. ಟಿ-1 ಅನ್ನು ಪ್ರೀತಿಯಿಂದ ‘ದಾದಿ’ ಎಂದೂ ಕರೆಯಲಾಗುತ್ತಿತ್ತು ಎನ್ನಲಾಗಿದೆ. ಪನ್ನಾ ಪ್ರಪಂಚದಾದ್ಯಂತದ ಅತ್ಯಂತ ಯಶಸ್ವಿ ಹುಲಿ ಚೇತರಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಮಂಗಳವಾರದಂದು ಮಾಡ್ಲಾ ರೇಂಜ್ ನಲ್ಲಿ ಗಸ್ತು ತಿರುಗುತ್ತಿದ್ದ ತಂಡಕ್ಕೆ ಹುಲಿಯ ಮೃತದೇಹ ಪತ್ತೆಯಾಗಿದೆ. ಹುಲಿಯ ಪಕ್ಕದಲ್ಲಿ ನಿಷ್ಕ್ರಿಯ ರೇಡಿಯೋ ಕಾಲರ್ ದೊರೆತಿದ್ದು, ಇದರಿಂದ ಹುಲಿಯನ್ನು ಗುರುತಿಸಲಾಗಿದೆ. ಹುಲಿಯ ಮೃತದೇಹ ಎಲ್ಲಾ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳನ್ವಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಟಿ-1 ಗೆ ವಯಸ್ಸಾಗಿದ್ದರಿಂದ ಆಕೆಯಲ್ಲಿ ಬೇಟೆಯಾಡುವ ಚೈತನ್ಯವಿರಲಿಲ್ಲ ಮತ್ತು ಆಕೆ ಇತರ ಪ್ರಾಣಿಗಳು ಬೇಟೆಯಾಡಿದ ಪ್ರಾಣಿಗಳನ್ನು ತಿಂದು ಜೀವನ ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರ: ಪನ್ನಾದಲ್ಲಿ ಪುನಶ್ಚೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದ ನಂತರ 2010 ರಲ್ಲಿ ಹುಲಿಗಳ ಮೊದಲ ಜನನವನ್ನು ದಾಖಲಿಸಿದ ಮೇಲ್ವಿಚಾರಣಾ ತಂಡ ತೆಗೆದ ಚಿತ್ರ
ಮಾಹಿತಿ: ಪರ್ವೀನ್ ಕಸ್ವಾನ್