ಫೆಬ್ರವರಿ 9-10 ರಂದು ವಿದೇಶದಲ್ಲಿ ಉದ್ಯೋಗಾಸಕ್ತರಿಗಾಗಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ

ಉಡುಪಿ: ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವತಿಯಿಂದ ಜಾರಿಗೊಳಿಸುತ್ತಿರುವ ಅಂತರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ (ಐ.ಎಮ್.ಸಿ-ಕೆ) ಯೋಜನೆಯಡಿ ಪ್ರಾರಂಭಿಸಲಾದ ವಲಸೆ ಮಾಹಿತಿ ಕೇಂದ್ರಗಳ ಮೂಲಕ ಸಾಗರೋತ್ತರ ನೇಮಕಾತಿಗಾಗಿ ಸಂವಹನ ಚಟಿವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದೇಶಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡುವ ವೃತ್ತಿಗಳಾದ ಗೃಹ ಕಾರ್ಮಿಕರು, ಕಟ್ಟಡ ನಿರ್ಮಾಣ ಕೆಲಸಗಾರರು, ದಾದಿಯರು, ಮತ್ತು ಇತರೆ ವರ್ಗಗಳ ಮೇಲೆ ಕೇಂದ್ರೀಕರಿಸಲಾಗಿದೆ.

ಜಿಲ್ಲೆಯಲ್ಲಿ 2 ದಿನಗಳ ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಫೆಬ್ರವರಿ 9 ರಂದು ಬೆಳಗ್ಗೆ 11 ಸಂಬಂಧಪಟ್ಟ ಎಲ್ಲಾ ಭಾಗೀದಾರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಯುವ ಪೂರ್ವಭಾವಿ ಚರ್ಚೆ ಸಭೆಯಲ್ಲಿ ಐ.ಎಮ್.ಸಿ-ಕೆ ಅಧಿಕಾರಿಗಳು ಭಾಗವಹಿಸಿ ಯೋಜನೆಯ ಕುರಿತು ಮಾಹಿತಿ ನೀಡಲಿದ್ದಾರೆ ಹಾಗೂ ಫೆ. 10 ರಂದು ಬೆಳಗ್ಗೆ 10.30 ಕ್ಕೆ ವಿದೇಶದಲ್ಲಿ ಉದ್ಯೋಗ ಮಾಡಲು ಆಸಕ್ತರಿರುವ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳ ಜೊತೆ ಸಂವಾದ ಕ್ಯಾಂಪ್
ಅನ್ನು ನಗರದ ಮಿಷನ್ ಕಂಪೌಂಡ್‌ನ ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು.

ವಿದೇಶದಲ್ಲಿ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಉಡುಪಿ ವಿಭಾಗದ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.