ಮಾಚೀದೇವರ ಆದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಮಡಿವಾಳ ಮಾಚೀದೇವ ಅವರ ಆದರ್ಶ, ಆಲೋಚನೆ ಮತ್ತು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಅವರು ಯಾವ ಧ್ಯೇಯಕ್ಕಾಗಿ ಸಮಾಜದಲ್ಲಿ ಶ್ರಮಿಸಿದರು ಎಂದು ನಾವು ಅರಿತುಕೊಳ್ಳಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಡಿವಾಳ ಮಾಚೀದೇವ ಜಯಂತಿ ಕಾರ್ಯಕ್ರಮದಲ್ಲಿ ಮಾಚೀದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಒಂದು ಕಾಲದಲ್ಲಿ ಬಡವರಿಗೆ ಶಿಕ್ಷಣ ಇರಲಿಲ್ಲ. ಅಸ್ಪೃಶ್ಯತೆಯನ್ನು ಅನುಭವಿಸುತ್ತಿದ್ದರು. ಸಮಾಜದಲ್ಲಿ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಖಚಿತವಾದ ವ್ಯವಸ್ಥೆಯಿಲ್ಲದೇ ಬಳಲುತ್ತಿದ್ದರು. ಸಮಾಜದಲ್ಲಿರುವ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುವ ಮೂಲಕ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವ ಹಾಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು. ಮಡಿವಾಳ ಸಮುದಾಯದ ಆರ್ಥಿಕ ಅಭಿವೃದ್ಧಿಗೆ 25 ಲಕ್ಷ ರೂ. ಗಳನ್ನು ಬಿಡುಗಡೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, 12 ನೇ ಶತಮಾನದಲ್ಲಿ ಮಡಿವಾಳ ಮಾಚೀದೇವ ಅವರು ಅಸಮಾನತೆ ಮತ್ತು ಶೋಷಣೆಯನ್ನು ತಮ್ಮ ಸಾಹಿತ್ಯದ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ. ಯಾವುದೇ ಸಮುದಾಯ ವರ್ಗದವರಾದರೂ ಸಮಾಜದಲ್ಲಿ ಅವರು ಯಶಸ್ಸು ಕಾಣಬೇಕಾದರೆ, ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರಬೇಕು ಎಂದರು.

ರಜಕ ಯಾನೆ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ಮಡಿವಾಳ ಹೆರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜದ
ಮುಖಂಡರುಗಳು, ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಭಾರತಿ ಚಂದ್ರಶೇಖರ್ ವಂದಿಸಿದರು.