ನವದೆಹಲಿ: ಮಧ್ಯಕರ್ನಾಟಕಕ್ಕೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಭದ್ರ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 5300 ಕೋಟಿ ಅನುದಾನ ನೀಡುವ ಮೂಲಕ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ.
ಕರ್ನಾಟಕದ ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಇತರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು 5300 ಕೋಟಿ ಅನುದಾನ ನೀಡಿ, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದಾರೆ.
ಈ ಯೋಜನೆಯಿಂದ 5,57,022 ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಡಲಿದೆ.
ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ನೀರಾವರಿ ಯೋಜನೆ ಎಂಬ ಹಿರಿಮೆಗೆ ಭದ್ರಾ ಮೇಲ್ದಂಡೆ ಪಾತ್ರವಾಗಿದೆ. ಹನಿ ನೀರಾವರಿ ಮೂಲಕ ಸೌಲಭ್ಯ ಕಲ್ಪಿಸುವ ಬೃಹತ್ ಗಾತ್ರದ ನೀರಾವರಿ ಯೋಜನೆ ಇದಾಗಿದೆ.
ಇದಲ್ಲದೆ, ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲವನ್ನು ಮುಂದುವರೆಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ. 30ರಷ್ಟು ಹೆಚ್ಚಳವಾಗಿದೆ. ಇ.ವಿ ಕಾರುಗಳಿಗೆ ಉತ್ತೇಜನ ನೀಡಲು ರಾಜ್ಯಗಳಿಗೆ ಬೆಂಬಲ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ 6,000 ಕೋಟಿ ರೂ. ಮೊತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಇದಲ್ಲದೆ, ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ, ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಜಗತ್ತಿನ ಪ್ರಗತಿಗೆ ಪೂರಕವಾಗಿ ವಿಶೇಷ ಕೃಷಿ ಪ್ರಗತಿನಿಧಿ ಆರಂಭಿಸುವುದಾಗಿ ಸಚಿವರು ಘೋಷಿಸಿದ್ದಾರೆ.