ಹೊಸದಿಲ್ಲಿ: “ಆಜಾದಿ ಕಾ ಅಮೃತ್ ಮಹೋತ್ಸವ್” ಆಚರಣೆಯ ಅಂಗವಾಗಿ ರಾಷ್ಟ್ರಪತಿಗಳ ಅಧಿಕೃತ ನಿವಾಸ, ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನಗಳಿಗೆ “ಅಮೃತ ಉದ್ಯಾನ” ಎಂದು ಮರುನಾಮಕರಣ ಮಾಡಲಾಗಿದೆ. ಇದುವರೆಗೂ ಇಲ್ಲಿ ತೂಗುಹಾಕಲಾಗಿದ್ದ “ಮೊಘಲ್ ಗಾರ್ಡನ್ಸ್” ಎಂಬ ಹಳೆಯ ರಸ್ತೆ ಫಲಕವನ್ನು ತೆಗೆದು ಹಾಕಲಾಗಿದೆ.
ಸ್ವಾತಂತ್ರ್ಯದ 75ನೇ ವರ್ಷವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸುವ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದ ಉದ್ಯಾನಗಳಿಗೆ ಅಮೃತ್ ಉದ್ಯಾನ್ ಎಂದು ಸಾಮಾನ್ಯ ಹೆಸರನ್ನು ನೀಡಿದ್ದಾರೆ ಎಂದು ಅಧ್ಯಕ್ಷರ ಉಪ ಪತ್ರಿಕಾ ಕಾರ್ಯದರ್ಶಿ ನವಿಕಾ ಗುಪ್ತಾ ತಿಳಿಸಿದ್ದಾರೆ.
President Droupadi Murmu will grace the opening of the Amrit Udyan tomorrow. https://t.co/4rXOMlZXA3 pic.twitter.com/7WhgilMoWW
— President of India (@rashtrapatibhvn) January 28, 2023
ರಾಷ್ಟ್ರಪತಿ ಭವನದಲ್ಲಿ ಮೊಘಲ್ ಮತ್ತು ಪರ್ಷಿಯನ್ ಉದ್ಯಾನಗಳಿಂದ ಪ್ರೇರಿತವಾದ ಮೂರು ಉದ್ಯಾನಗಳಿವೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಈ ಹೆಸರಿನ ಉದ್ಯಾನದಿಂದ ಸ್ಫೂರ್ತಿ ಪಡೆದ ರಾಷ್ಟ್ರಪತಿ ಭವನದ ಉದ್ಯಾನವನ್ನು ಸಾರ್ವಜನಿಕರು ಮತ್ತು ಅಧಿಕಾರಿಗಳು “ಮೊಘಲ್ ಗಾರ್ಡನ್ಸ್” ಎಂದು ಕರೆಯುತ್ತಿದ್ದರಾದರೂ, ಅಧಿಕೃತವಾಗಿ ಈ ಉದ್ಯಾನಗಳಿಗೆ “ಮೊಘಲ್ ಗಾರ್ಡನ್ಸ್” ಎಂದು ಹೆಸರಿಸಲಾಗಿಲ್ಲ.
15 ಎಕರೆಯಲ್ಲಿ ಹರಡಿರುವ ಅಮೃತ್ ಉದ್ಯಾನವನ್ನು ರಾಷ್ಟ್ರಪತಿ ಭವನದ ಆತ್ಮ ಎಂದು ಕರೆಯಲಾಗುತ್ತದೆ. ಭಾರತವು ವಸಾಹತುಶಾಹಿಗೆ ಒಳಪಟ್ಟಿದ್ದಕ್ಕೆ ಸಾಕ್ಷಿಯಾಗಿರುವ ಎಲ್ಲ ಕುರುಹು ಮತ್ತು ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ವ ಮೊಘಲ ಮತ್ತು ಬ್ರಿಟಿಷ್ ಕಾಲಕ್ಕೆ ಸಂಬಂಧಿಸಿದ ಹೆಸರು ಮತ್ತು ಚಿಹ್ನೆಗಳನ್ನು ಬದಲಾಯಿಸಲಾಗುತ್ತಿದೆ. ದೇಶವು ಪಾರತಂತ್ರ್ಯದ ಬೇಡಿಗಳಿಂದ ಅದಾಗಲೇ ಸ್ವತಂತ್ರವಾಗಿದ್ದು, ಪಾರತಂತ್ರ್ಯವನ್ನು ನೆನಪಿಸುವ ಎಲ್ಲ ಕುರುಹುಗಳಿಗೆ ಇತಿಶ್ರೀ ಹಾಕಲಾಗುತ್ತಿದೆ.












