ಕುಂದಾಪುರ: ಇಲ್ಲಿನ ಖಾಸಗಿ ಬಸ್ ಒಂದರಲ್ಲಿ ವಿಪರೀತ ಜನ ಜಂಗುಳಿ ಇದ್ದ ಕಾರಣ ಫುಟ್ ಬೋರ್ಡ್ ಮೇಲೆ ನಿಂತು ಕಾಲೇಜಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಬಸ್ ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಮ್ಮಾಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ (20) ಸಾವನ್ನಪ್ಪಿದ ದುರ್ದೈವಿ.
ಶನಿವಾರ ಬೆಳಿಗ್ಗೆ ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ನಲ್ಲಿ ಸುದೀಪ್ ಸಂಚರಿಸುತ್ತಿದ್ದಾಗ ಈ ಅವಘಡ ನಡೆದಿದೆ ಎನ್ನಲಾಗಿದೆ. ಹೆಮ್ಮಾಡಿ ಜಂಕ್ಷನ್ ಗೂ ಮೊದಲಿನ ಕಟ್ ಬೇಲ್ತೂರು ನಿಲ್ದಾಣದಲ್ಲಿ ಸುದೀಪ್ ಬಸ್ ಹತ್ತಿದ್ದರು. ಆದರೆ ಬಸ್ ನಲ್ಲಿ ವಿಪರೀತ ಜನಜಂಗುಳಿ ಇದ್ದದ್ದರಿಂದ ಸುದೀಪ್ ಫುಟ್ ಬೋರ್ಡ್ ಮೇಲೆ ನಿಂತಿದ್ದರು. ಹೆಮ್ಮಾಡಿಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಹತ್ತಿಸಿಕೊಳ್ಳಲಾಯಿತು. ಬಸ್ ಮತ್ತೆ ಚಲಿಸಲು ಪ್ರಾರಂಭಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಇಳಿಯದ ಹಿನ್ನೆಲೆಯಲ್ಲಿ ಬಸ್ ನಿಲ್ಲಿಸಿ ಅವರನ್ನು ಇಳಿಸಿ ಮತ್ತೆ ಬಸ್ ಚಲಾಯಿಸಿದಾಗ ಸುದೀಪ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಬಸ್ ಗೆ ಮುಂಭಾಗದಲ್ಲಿ ಮಾತ್ರ ಒಂದು ಬಾಗಿಲಿದ್ದ ಕಾರಣ ಮುಂಬದಿಯ ಬಾಗಿಲ ಫುಟ್ ಬೋರ್ಡಿನಲ್ಲಿ ನಿಂತಿದ್ದ ಸುದೀಪ್ ಬಸ್ ನ ಮುಂಬದಿಯ ಚಕ್ರದಡಿಯಲ್ಲಿ ಸಿಲುಕಿದ್ದಾರೆ. ಬಸ್ಸಿನ ಚಾಲಕ ವಿದ್ಯಾರ್ಥಿಯನ್ನು ಉಳಿಸುವ ಪ್ರಯತ್ನ ನಡೆಸಿದರಾದರೂ ಸೊಂಟದ ಮೇಲೆ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡ ಸುದೀಪ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.