ಕಾರ್ಕಳ: ತಾಲೂಕಿನ ಬೈಲೂರಿನ ಉಮಿಕುಂಜ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಉದ್ಘಾಟನೆ ಮಾಡಿ, ಪರಶುರಾಮನ ಬೃಹತ್ ಪ್ರತಿಮೆಯ ಮೂಲಕ ತುಳುನಾಡು ಬಂಗಾರದ ನಾಡಾಗಲಿ ಎಂದು ಶುಭ ಹಾರೈಸಿದರು.
ಪರಶುರಾಮ್ ಥೀಂ ಪಾರ್ಕ್ಅನ್ನು 15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪರಶುರಾಮನ ಪ್ರತಿಮೆ, ಬಯಲು ರಂಗ ಮಂದಿರ ಆರ್ಟ್ ಗ್ಯಾಲರಿ, ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ.
ಕಾರ್ಕಳದಲ್ಲಿ ಪ್ರತಿಷ್ಠಾಪಿಸುತ್ತಿರುವ ಈ ಪರಶುರಾಮನ ವಿಗ್ರಹ 33 ಅಡಿ ಎತ್ತರವಿದ್ದು, 15 ಟನ್ ಭಾರವಿದೆ. ಈ ವಿಗ್ರಹವನ್ನು ಕಂಚು ಮತ್ತು ಉಕ್ಕು ಬಳಸಿ ನಿರ್ಮಿಸಲಾಗಿದೆ. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣ ನಾಯ್ಕ ಅವರು ಈ ಮೂರ್ತಿಯನ್ನು ನಿರ್ಮಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಮೆ ನಿರ್ಮಾಣ ಮಾಡಿ ಕಾರ್ಕಳಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಗಿದೆ.
ಪರುಶುರಾಮ ಥೀಂ ಪಾರ್ಕ್ ನಿಂದ ಪ್ರವಾಸೋದ್ಯಮಕ್ಕೆ ಉತ್ತೇಜನಸಿಗಲಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಥೀಂ ಪಾರ್ಕನ್ನು ನಿರ್ಮಿಸಲಾಗಿದೆ. ಪ್ರತಿಮೆಯ ಜೊತೆಗೆ ಪಾರ್ಕ್ನಲ್ಲಿ ಆಡಿಯೋ ವಿಶ್ಯುವಲ್ ಕೊಠಡಿ, ಸುಸಜ್ಜಿತ ಮ್ಯೂಸಿಯಂ, ನೇಯ್ಗೆ ಡೆಕ್ ಗ್ಯಾಲರಿ, ಬಯಲು ರಂಗಮಂದಿರ ಕೂಡ ಇರಲಿದೆ.
ಉಡುಪಿಯ ಯುವ ವಾಸ್ತುವಿನ್ಯಾಸಗಾರ ಎ.ಆರ್. ಸಂಪ್ರೀತ್ ರಾವ್ ಈ ಥೀಮ್ ಪಾರ್ಕನ್ನು ವಿನ್ಯಾಸಗೊಳಿಸಿದ್ದು, ಸುಮಾರು 100 ಅಡಿ ಎತ್ತರದ ಬಂಡೆಕಲ್ಲನ್ನು ಮತ್ತು ಅದರ ಸುತ್ತ ಪ್ರಾಕೃತಿಕ ಪರಿಸರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಉಡುಪಿ ನಿರ್ಮಿತಿ ಕೇಂದ್ರ ಈ ಯೋಜನೆಯ ನಿರ್ಮಾಣದ ಉಸ್ತುವಾರಿ ವಹಿಸಿದ್ದು, ವರ್ಷದೊಳಗೆ ನಿರ್ಮಾಣ ಕಾಮಗಾರಿಯನ್ನು ಪೂರೈಸಲಾಗಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಇಂಧನ ಸಚಿವ ಸುನಿಲ್ ಕುಮಾರ್, ಚಿತ್ರ ನಟ ರಿಷಭ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ , ಎಸ್ಪಿ ಅಕ್ಷಯ್ ಮಚ್ಚೀಂದ್ರ ಮುಂತಾದವರು ಉಪಸ್ಥಿತರಿದ್ದರು.
ಪಾರ್ಕಿನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಯೋಗ್ಯ ಶೌಚಾಲಯ ಅಳವಡಿಸಲಾಗಿದೆ. ಇದರ ವಿಶೇಷತೆಯೆಂದರೆ ಶೌಚಾಲಯದಲ್ಲಿ ಬಳಸಿದ ನೀರು ಮಾನವ ತ್ಯಾಜ್ಯದೊಂದಿಗೆ ಮ್ಯಾಕ್ ಬಯೋ ಡೈಜೆಸ್ಟರ್ ಮೂಲಕ ಯಾವುದೇ ರೀತಿಯ ವಿದ್ಯುತ್ ಅಥವಾ ಇಂಧನದ ಸಹಾಯವಿಲ್ಲದೆ ಮಾಲಿನ್ಯ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕೂ ಹೆಚ್ಚಿನ ರೀತಿಯಲ್ಲಿ ಶುದ್ದೀಕರಣಗೊಂಡು ಪುನಃ ಸೋಲಾರ್ ಪಂಪಿನ ಮೂಲಕ ಶೌಚಾಲಯದ ಮೇಲಿನ ಟ್ಯಾಂಕಿಗೆ ವರ್ಗಾವಣೆಯಾಗುತ್ತದೆ.ಇದರಿಂದ ಬಳಸಿದ ನೀರನ್ನು ಪುನಃ ಸಂರಕ್ಷಿಸಿದಂತಾಗುತ್ತದೆ.
ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಪ್ರಯುಕ್ತ ಬೋಂಡುಕುಮೇರಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೆ ಸಚಿವರ ವತಿಯಿಂದ ಸಮಾಧಾನಕರ ಬಹುಮಾನ ವಿತರಿಸಲಾಯಿತು.