ಬೊಮ್ಮಾಯಿ ಸರ್ಕಾರ ವಿಫಲ; ಮೋದಿ ಹೆಸರಲ್ಲಿ ಬಿಜೆಪಿ ಮತಯಾಚನೆ: ಡಿ.ಕೆ.ಶಿವಕುಮಾರ್

ಉಡುಪಿ: ರಾಜ್ಯದ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ದಯನೀಯವಾಗಿ ವಿಫಲವಾಗಿದ್ದು, ಪಕ್ಷವು 2023 ರ ಚುನಾವಣೆಯನ್ನು ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಎದುರಿಸಬೇಕಾಗಿದೆ. ರಾಜ್ಯ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು ಅದಕ್ಕೀಗ ರಾಷ್ಟ್ರೀಯ ನಾಯಕರ ಅವಶ್ಯಕತೆಯಿದೆ. ಬಿಜೆಪಿಯು ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ ಮತ್ತು ಗಗನಕ್ಕೇರಿರುವ ಬೆಲೆ ಏರಿಕೆಯನ್ನು ತಡೆಯಲೂ ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು.

ಅವರು ಭಾನುವಾರ ಉಡುಪಿಯ ಮಿಶನ್ ಕೌಂಪಾಡಿನ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ಏರ್ಪಡಿಸಲಾಗಿದ್ದ ಪ್ರಜಾಧ್ವನಿ ಯಾತ್ರೆ ಬೃಹತ್ ಸಮಾವೇಶವನ್ನುದ್ಘಾಟಿಸಿ ಮಾತನಾಡಿದರು.

ರಾಜ್ಯದ ಎಲ್ಲಾ ಕುಟುಂಬಗಳ, ಅದರಲ್ಲೂ ಮುಖ್ಯವಾಗಿ ಮನೆಗಳನ್ನು ನಡೆಸುವ ಮಹಿಳೆಯರ ಕಷ್ಟಗಳ ಬಗ್ಗೆ ಕಾಂಗ್ರೆಸ್ ಗೆ ಅರಿವಿದೆ. ಗೃಹಜ್ಯೋತಿ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಮೊದಲ ಭರವಸೆಯಾಗಿದ್ದರೆ, ಎರಡನೆಯದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 2,000 ರೂ ಪಾವತಿ ಮಾಡುವ ಆಶ್ವಾಸನೆ ನೀಡಿದ್ದೇವೆ. ಮೊದಲ ಬಾರಿಗೆ ಶಾಸಕನಾಗಿದ್ದರೂ ಪ್ರಮೋದ್ ಮಧ್ವರಾಜ್ ಅವರನ್ನು ಮಂತ್ರಿ ಮಾಡಿದ್ದರೂ ಪಕ್ಷ ತೊರೆದು ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದಲ್ಲಿ ನಿಂತರೂ ಅವರನ್ನು ಸೋಲಿಸಿ ಎಂದು ಅವರು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಆಡಳಿತಾರೂಢ ಬಿಜೆಪಿ ರಾಜಕೀಯ ಲಾಭಕ್ಕಾಗಿ ಕರಾವಳಿ ಕರ್ನಾಟಕವನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಲು ಯತ್ನಿಸುತ್ತಿದೆ. ಸಮಾಜದಲ್ಲಿ ಒಡಕು ಮೂಡಿಸಲು ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಸುಳ್ಳುಗಳನ್ನು ಹಬ್ಬಿಸುತ್ತಿದೆ. ಹಿಂದೂಯಿಸಂ ಮತ್ತು ಹಿಂದುತ್ವ ಸಂಪೂರ್ಣ ಭಿನ್ನ. ಬಿಜೆಪಿಯ ಮನಸ್ಥಿತಿಯನ್ನು ಜನರು ಅರಿತುಕೊಂಡಿದ್ದಾರೆ. ಕಾಂಗ್ರೆಸ್ ಯಾವುದೇ ಧರ್ಮವನ್ನು ಲೆಕ್ಕಿಸದೆ ಜನರಲ್ಲಿ ಪ್ರೀತಿಯನ್ನು ಹರಡುತ್ತದೆ ಎಂದರು.

ಎಮ್.ಎಲ್.ಸಿ.ಬಿ.ಕೆ.ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕರಾದ ಯು.ಟಿ.ಖಾದರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಗೋಪಾಲ್ ಪೂಜಾರಿ, ಶಕುಂತಲಾ ಶೆಟ್ಟಿ, ಐವನ್ ಡಿಸೋಜಾ, ಪ್ರತಾಪಚಂದ್ರ ಶೆಟ್ಟಿ, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಕಾಂಗ್ರೆಸ್ ಮುಖಂಡರಾದ ಪುಷ್ಪಾ ಅಮರನಾಥ್ , ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಹಬೀಬ್ ಅಲಿ, ಅಮೃತ್ ಶೆಣೈ, ಎಂ ಎ ಗಫೂರ್, ಕೃಷ್ಣಮೂರ್ತಿ ಆಚಾರ್ಯ, ಅಶೋಕ್ ಪೂಜಾರಿ, ರಾಜು ಪೂಜಾರಿ, ಪ್ರಶಾಂತ್ ಜತ್ತಣ್ಣ, ವೆರೋನಿಕಾ ಕರ್ನೇಲಿಯೋ, ರೋಶ್ನಿ ಆಲಿವರ್, ಡಾ ಸುನೀತಾ ಶೆಟ್ಟಿ, ಸೌರಭ್ ಕೋಟ್ಯಾನ್ ಬಲ್ಲಾಳ್ ಉಪಸ್ಥಿತರಿದ್ದರು.