ಭೂಕುಸಿತ ನಿರಂತರ: ಉತ್ತರಾಖಂಡದ ಜೋಶಿಮಠವಿನ್ನು ‘ಜೀವಿಸಲು ಅಸುರಕ್ಷಿತ’; ಸರ್ಕಾರದ ಘೋಷಣೆ

ಜೋಶಿಮಠ: ಮಾನವನ ದುರಾಸೆ ಮತ್ತು ಅಸಡ್ಡೆಗೆ ಬಲಿಯಾದ ಸನಾತನ ಧರ್ಮದ ಅತ್ಯಂತ ಪವಿತ್ರ ಆಧ್ಯಾತ್ಮಿಕ ಸ್ಥಳವಿನ್ನು ಜೀವಿಸಲು ‘ಅಸುರಕ್ಷಿತ’ ಎನ್ನುವ ಹಣೆಪಟ್ಟಿಯನ್ನು ಅಧಿಕೃತವಾಗಿ ಪಡೆದುಕೊಂಡಿದೆ.

ಉತ್ತರಾಖಂಡ ಸರ್ಕಾರವು ಜೋಶಿಮಠದ ಎಲ್ಲಾ ಒಂಬತ್ತು ಪುರಸಭೆಯ ವಾರ್ಡ್‌ಗಳನ್ನು ವಿಪತ್ತು ನಿರ್ವಹಣಾ ಕಾಯಿದೆಯಡಿ ‘ವಿಪತ್ತು ಪೀಡಿತ’ ಮತ್ತು ‘ಜೀವನಕ್ಕೆ ಅಸುರಕ್ಷಿತ’ ಎಂದು ಘೋಷಿಸಿದೆ. ಹಿಮಾಲಯದ ತಪ್ಪಲಿನ ಪವಿತ್ರ ನಗರದಲ್ಲಿ 600 ಕ್ಕೂ ಹೆಚ್ಚು ಮನೆಗಳಲ್ಲಿ ಹಾಗೂ ಇಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಬಿರುಕುಗಳನ್ನು ಉಂಟುಮಾಡಿದ ಭೂಕುಸಿತದಿಂದ ಹೆಚ್ಚುತ್ತಿರುವ ಬೆದರಿಕೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಈ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಗಿದೆ.

Image

ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ, ಉತ್ತರಾಂಚಲ ವಿಪತ್ತು ತಗ್ಗಿಸುವಿಕೆ, ನಿರ್ವಹಣೆ ಮತ್ತು ತಡೆಗಟ್ಟುವಿಕೆ ಕಾಯಿದೆ 2005 ರ ಸೆಕ್ಷನ್ 23 ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಮತ್ತು ಜೋಶಿಮಠದ ಮನೆಗಳ ಸಮೀಕ್ಷೆ ನಡೆಸುತ್ತಿರುವ ತಜ್ಞರ ತಂಡವು ರಾಜ್ಯಾಡಳಿತಕ್ಕೆ ಶಿಫಾರಸು ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಭೂ ಕುಸಿತದ ಚಟುವಟಿಕೆಗಳಿಂದ ಪಟ್ಟಣದ ಕೆಲವು ನಿವಾಸಿಗಳು ಎದುರಿಸುತ್ತಿರುವ ಮಾನಸಿಕ ಆಘಾತವನ್ನು ಪರಿಹರಿಸಲು ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರ ತಂಡವನ್ನು ಕಳುಹಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಏತನ್ಮಧ್ಯೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಜೋಶಿಮಠದ ಪ್ರಸಕ್ತ ಪರಿಸ್ಥಿತಿ ಮತ್ತು ಆ ಪ್ರದೇಶದ ಜನರ ಪುನರ್ವಸತಿ ಮತ್ತು ಸುರಕ್ಷತೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಪ್ರಧಾನಿ ಎಲ್ಲಾ ರೀತಿಯ ಸಹಾಯ ನೀಡುವ ಭರವಸೆ ನೀಡಿದ್ದಾರೆ.

ಜೋಶಿಮಠದಲ್ಲಿ ಇಂದಿನ ಪರಿಸ್ಥಿತಿ ಆಧ್ಯಾತ್ಮಿಕ ಸ್ಥಳಗಳನ್ನು ಪ್ರವಾಸೋದ್ಯಮಕ್ಕಾಗಿ ಬಳಸುವ ಸಾರ್ವಜನಿಕರು ಮತ್ತು ಸರಕಾರಗಳಿಗೆ ಎಚ್ಚರಿಕೆಯ ಕರೆಘಂಟೆ ಎನ್ನಲಾಗಿದೆ. ತಜ್ಞರ ವರದಿಗಳನ್ನು ತಿರಸ್ಕರಿಸಿ, ಅಭಿವೃದ್ದಿ ಹೆಸರಿನಲ್ಲಿ ಎಗ್ಗಿಲ್ಲದೆ ಪ್ರಕೃತಿಯ ಶೋಷಣೆ ಮಾಡಿರುವ ಕಾರಣ ಜೋಶಿಮಠವಿಂದು ಜೀವಿಸಲು ಅಸುರಕ್ಷಿತ ಎನ್ನುವ ಮಟ್ಟಿಗೆ ಬಂದಿದೆ ಎನ್ನುವುದು ತಜ್ಞರ ಅಂಬೋಣ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸರಕ್ಕೆ ಮಾರಕವಾಗುವಂತಹ ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡಿರುವುದೆ ಇಂದಿನ ಪರಿಸ್ಥಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಈ ಪರಿಸರದಲ್ಲಿ ಪ್ರಕೃತಿ ವಿಕೋಪಗಳಾಗಿದ್ದು ಪ್ರಕೃತಿಯೇ ಜನರನ್ನು ಎಚ್ಚರಿಸಿದ್ದರೂ ಸ್ವಾರ್ಥಕ್ಕಾಗಿ ಜಾಣ ಕುರುಡು ಪ್ರದರ್ಶಿಸಿದ ಸಾರ್ವಜನಿಕರು ಮತ್ತು ಸರಕಾರಗಳು ಇದಕ್ಕೆ ಹೊಣೆ ಎನ್ನುವ ಆರೋಪ ಕೇಳಿಬರುತ್ತಿದೆ.