ಮಂಗಳೂರು: ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿಗಾಗಿ ಮೂರು ವರ್ಷಗಳ ಹಿಂದೆ ಯಕ್ಷಾಭಿನಯ ಬಳಗ ಎಂಬ ಸಂಘವನ್ನು ಹುಟ್ಟುಹಾಕಿ ಯಕ್ಷಗುರು ‘ಯಕ್ಷಶ್ರೀ’ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ ಇವರ ನಿರ್ದೇಶನದಲ್ಲಿ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತಿದೆ. ಈ ಸಂಘದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರು ಕೂಡಾ ಯಕ್ಷಗಾನದ ತಾಳ ಮತ್ತು ಪ್ರಸಂಗ ಅಭ್ಯಾಸ ಮಾಡುತ್ತಿದ್ದಾರೆ. ಗುರುಗಳ ನಿರ್ದೇಶನದಲ್ಲಿ ಸಂಘದ ಸದಸ್ಯರು ಈಗಾಗಲೇ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ನೀಡಿರುತ್ತಾರೆ. ಇದೀಗ ಯಕ್ಷಾಭಿನಯ ಬಳಗದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸದಸ್ಯರಿಂದ ಜ 8, ಭಾನುವಾರದಂದು ಮಧ್ಯಾಹ್ನ 2 ಘಂಟೆಗೆ ಮಂಗಳೂರು ಪುರಭವನದಲ್ಲಿ ತಾಮ್ರದ್ವಜ ಕಾಳಗ ಮತ್ತು ಮೀನಾಕ್ಷಿ ಕಲ್ಯಾಣ ಎಂಬ ಎರಡು ಪ್ರಸಂಗಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಎರಡು ಪ್ರಸಂಗಗಳ ನಿರ್ದೇಶಕರು ಯಕ್ಷಗುರು ‘ಯಕ್ಷಶ್ರೀ’ ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿ. ಹಿಮ್ಮೇಳದಲ್ಲಿ ಭಾಗವತರಾಗಿ ಜನಸಾಲೆ ರಾಘವೇಂದ್ರ ಆಚಾರ್ ಮತ್ತು ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮದ್ದಳೆಯಲ್ಲಿ ಭರತ್ ಚಂದನ್ ಕೋಟೇಶ್ವರ, ಚಂಡೆಯಲ್ಲಿ ಶ್ರೀಕಾಂತ ಶೆಟ್ಟಿ ಯಡಮೊಗೆ ಹಾಗೂ ವೇಷಭೂಷಣದಲ್ಲಿ ಬಾಲಕೃಷ್ಣ ನಾಯಕ್ ಹಂದಾಡಿ ಇವರು ಸಹಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಯಕ್ಷ ಗುರುಗಳಾದ ‘ಯಕ್ಷಶ್ರೀ’ ಐರೋಡಿ ಮಂಜುನಾಥ ಕುಲಾಲ್, ಇವರಿಗೆ ಶಿಷ್ಯವೃಂದದಿಂದ ಗುರುವಂದನೆಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪಟ್ಲ ಸತೀಶ್ ಶೆಟ್ಟಿ ಸ್ಥಾಪಕಾಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಡಾ.ಅಣ್ಣಯ್ಯ ಕುಲಾಲ್ ಉಳ್ತೂರು, ಅಧ್ಯಕ್ಷರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠ್ಠಾನ, ಶ್ರೀಮತಿ ಉಷಾ ಎನ್. ಹೆಬ್ಬಾರ್, ಶಾಖಾ ಪ್ರಬಂಧಕರು, ಕರ್ನಾಟಕ ಬ್ಯಾಂಕ್, ಮಣ್ಣಗುಡ್ಡ ಶಾಖೆ ಮತ್ತು ಶ್ರೀಮತಿ ಲೀಲಾವತಿ ಎಸ್.ಎನ್. ಕೈರನ್, ಮುಖ್ಯೋಪಾಧ್ಯಾಯಿನಿ, ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ, ಕಾಪಿಕಾಡು ಇವರು ಭಾಗವಹಿಸಲಿದ್ದಾರೆ.
ಅಧ್ಯಕ್ಷ ಪ್ರಶಾಂತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ರಾಘವೇಂದ್ರ ನೆಲ್ಲಿಕಟ್ಟೆ. ಜೊತೆ ಕಾರ್ಯದರ್ಶಿ ರಾಮಕೃಷ್ಣ ಮರಾಟಿ, ಸದಸ್ಯ ಉತ್ಸವ್ ಶೆಟ್ಟಿ ಮುಂತಾದವರು ಉಪಸ್ಥಿತರಿರಲಿದ್ದಾರೆ.