ಉಡುಪಿ: ತಾಲ್ಲೂಕಿನ ಉಪ್ಪೂರು ಧಕ್ಕೆಯಲ್ಲಿ ಮರಳು ದಿಬ್ಬ ತೆರವು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಕೆಲ ದುಷ್ಕರ್ಮಿಗಳು ಆಗಮಿಸಿ ಮರಳು ತೆರವು ಮಾಡದಂತೆ ಬೆದರಿಕೆ ಹಾಕಿ ಅಡ್ಡಿ ಪಡಿಸಿದ್ದಾರೆಂದು ಪರವಾನಗಿದಾರರೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿದ್ದು, ಇದನ್ನು ಎಸ್ಪಿ ಅವರಿಗೆ ವರ್ಗಾಯಿಸಿ ಪರವಾನಗಿದಾರರಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ನಿಯಂತ್ರಣ ವಲಯ (ಸಿಆರ್ ಝಡ್) ದ ಮರಳು ದಿಬ್ಬ ತೆರವು ಕಾರ್ಯಕ್ಕೆ ಸಂಬಂಧಿಸಿ, ಈಗಾಗಲೇ 11 ಮಂದಿ ಸಾಂಪ್ರದಾಯಿಕ ಮರಳುಗಾರರಿಗೆ ಪರವಾನಗಿ ನೀಡಲಾಗಿದೆ. ಆದರೆ ಪರವಾನಗಿ ಪಡೆದುಕೊಂಡು 15 ದಿನಗಳು ಕಳೆದರೂ ಇನ್ನು ಮರಳು ದಿಬ್ಬ ತೆರವು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ಹಾಗಾಗಿ ಪರವಾನಗಿ ಪಡೆದುಕೊಂಡವರಿಗೆ ಶೀಘ್ರ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಲಾಗಿದ್ದು, ಇಲ್ಲದಿದ್ದರೆ ಪರವಾನಗಿ ರದ್ದು ಮಾಡುತ್ತೇವೆಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.