ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ್ ಹೆಗ್ಡೆ ಅವರನ್ನು ಕಸ್ತೂರ್ಬಾ ಆಸ್ಪತ್ರೆಯ ಡೀನ್ ಆಗಿ ಜ.1ರಂದು ನೇಮಕ ಮಾಡಲಾಗಿದೆ.
ಡಾ.ಪದ್ಮರಾಜ್ ಹೆಗ್ಡೆ ಉಡುಪಿ ಜಿಲ್ಲೆಯ ಆತ್ರಾಡಿಯವರು. ಇವರು ಎಂಬಿಬಿಎಸ್ ಮತ್ತು ಎಂಎಸ್ ಜನರಲ್ ಸರ್ಜರಿ ಮತ್ತು ಎಂ.ಸಿಎಚ್ ಅನ್ನು (ಜೆನಿಟೋ ಯುರಿನರಿ ಸರ್ಜರಿ) ಮಣಿಪಾಲದ ಕೆಎಂಸಿಯಲ್ಲಿ ಪೂರ್ಣಗೊಳಿಸಿದ್ದಾರೆ. ಸ್ಕಾಟ್ಲೆಂಡ್ ನ ಗ್ಲಾಸ್ಗೋ ವಿಶ್ವವಿದ್ಯಾಲಯವು ಇವರಿಗೆ ಎಫ್‌ಆರ್‌ಸಿಎಸ್ ನೀಡಿದೆ ಮತ್ತು ಇವರು ಆಸ್ಪತ್ರೆ ಆಡಳಿತ ಮತ್ತು ಆರೋಗ್ಯ ಸೇವೆಗಳಲ್ಲಿ ಎಂಬಿಎ ಪದವಿ ಪಡೆದಿರುತ್ತಾರೆ.
ಮಣಿಪಾಲದ ಹಳೆ ವಿದ್ಯಾರ್ಥಿಯಾಗಿದ್ದ ಇವರು 1993 ರಲ್ಲಿ ಮಣಿಪಾಲದ ಕೆಎಂಸಿಯ ಜನರಲ್ ಸರ್ಜರಿ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದರು. ಅಲ್ಲಿಂದ ಇಲ್ಲಿವರೆಗೆ ಅವರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರು ಮಲೇಷಿಯಾದ ಮೆಲಕಾ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕರಾಗಿ, ಕೆ.ಎಂ.ಸಿಯ ಹಳೆ ವಿದ್ಯಾರ್ಥಿ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೆ.ಎಂ.ಸಿ ಮಣಿಪಾಲದ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಇವರು ಇದೀಗ ಆಸ್ಪತ್ರೆಯ ಡೀನ್ ಆಗಿ ನೇಮಕವಾಗಿದ್ದಾರೆ.












