ಬೀಡಿನಗುಡ್ಡೆ: ಜನವರಿ 13, 14, 15 ರಂದು ಪವರ್ ಪರ್ಬ-2023 ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ: ಮಹಿಳಾ ಉದ್ಯಮಿಗಳ ವೇದಿಕೆಯಾಗಿರುವ ಪವರ್ ಉಡುಪಿಯು ಸ್ವ-ಉದ್ಯಮದೊಂದಿಗೆ ಬೆಳೆಯುತ್ತಿರುವ ಮಹಿಳಾ ಉದ್ಯಮಿಗಳ ಹಾಗೂ ಕುಟುಂಬ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಒಗ್ಗೂಡುವಿಕೆಯೊಂದಿಗೆ 2009ರಲ್ಲಿ ಪ್ರಾರಂಭಗೊಂಡಿತು. ಇದೀಗ ಸಂಸ್ಥೆಯು ವಿಭಿನ್ನ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆ ಯೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಪವರ್ ಪರ್ಬವು ಪವರ್ ಸಂಸ್ಥೆಯಿಂದ ಉಡುಪಿಯಲ್ಲಿ ಆಯೋಜಿಸಲ್ಪಡುತ್ತಿರುವ ಅದ್ದೂರಿ ಕಾರ್ಯಕ್ರಮವಾಗಿದ್ದು ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. 2016ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮವು 2018 ಹಾಗೂ 2020ರಲ್ಲಿ ಅತ್ಯುತ್ತಮ ರೀತಿಯಲ್ಲಿ ಮೂಡಿಬಂದಿದ್ದು 10,000ಕ್ಕೂ ಹೆಚ್ಚು ಜನರು ಈ ಬೃಹತ್ ಮೇಳದಲ್ಲಿ ಪಾಲ್ಗೊಂಡಿದ್ದರು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಪವರ್ ಪರ್ಬ ವನ್ನು ಆಯೋಜಿಸುವುದರ ಮೂಲಕ ಮಹಿಳಾ ಉದ್ಯಮಿಗಳನ್ನು ಒಗ್ಗೂಡಿಸುವ ಹಾಗೂ ಬೆಂಬಲಿಸುವ ಪ್ರಯತ್ನವನ್ನು ಮಾಡಲಾಯಿತು.

ಪವರ್ ಪರ್ಬ ಉಡುಪಿಯ ಆಕರ್ಷಣೆಯ ಹಾಗೂ ಉಡುಪಿಗರ ಮೆಚ್ಚುಗೆಯ ಕಾರ್ಯಕ್ರಮವಾಗಿದ್ದು ಉತ್ತಮ ಜನ ಸ್ಪಂದನೆಗೆ ಪಾತ್ರವಾಗಿದೆ.ಮಹಿಳಾ ಉದ್ಯಮಿಗಳಿಂದಲೇ ಉತ್ಪಾದಿಸಲ್ಪಡುತ್ತಿರುವ ಹಾಗೂ ಮಾರುಕಟ್ಟೆ ಮಾಡಲ್ಪಡುತ್ತಿರುವ ವಿಭಿನ್ನ ಉತ್ಪನ್ನಗಳು ಮತ್ತು ಸೇವೆಗಳ ಪರಿಚಯ ಹಾಗೂ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುವ ಇದೊಂದು ಉತ್ತಮ ವೇದಿಕೆಯಾಗಿದೆ. ಅಲ್ಲದೆ ಈ ಮೂಲಕ ಗ್ರಾಹಕರನ್ನು ತಲುಪಲು ಹಾಗೂ ಪ್ರಾಯೋಗಿಕವಾಗಿ ಮಾರುಕಟ್ಟೆಯ ಕುರಿತು ತಿಳಿದುಕೊಳ್ಳಲು ಮತ್ತು ಅನುಭವ ಪಡೆದುಕೊಳ್ಳಲು ಸಹಕಾರಿಯಾಗಿದೆ. ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳಾ ಉದ್ಯಮಿಗಳನ್ನು ಒಂದೇ ಸೂರಿ ನಡಿಗೆ ತರುವ ವಿಶೇಷ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯುತ್ತಿದೆ.

ಈ ವರ್ಷದ ಪವರ್ ಪರ್ಬವನ್ನು ಉಡುಪಿ ಜಿಲ್ಲಾ ರಜತಮಹೋತ್ಸವ ಸಮಿತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಜಿ ಟ್ವೆಂಟಿ ಒನ್ ಅರ್ತ್ ಒನ್ ಫ್ಯಾಮಿಲಿ, ಒನ್ ಫ್ಯೂಚರ್ ಇವುಗಳ ಸಹಕಾರದೊಂದಿಗೆ 2023 ಜನವರಿ 13, 14, 15 ರಂದು ಉಡುಪಿ ಬೀಡಿನಗುಡ್ಡೆಯ ಬಯಲು ರಂಗ ಮಂದಿರದಲ್ಲಿ ನಡೆಸುವುದೆಂದು ಯೋಚಿಸಲಾಗಿದೆ.

ಪವರ್ ಪರ್ಬವು ನಮ್ಮ ಮಾರುಕಟ್ಟೆ ತಂಡದ ಸಹಕಾರದೊಂದಿಗೆ ನಡೆಯುತ್ತಿದ್ದು ಮಹಿಳಾ ಉದ್ಯಮಿಗಳಿಗೆ ಹೊಸತರ ಮಾರುಕಟ್ಟೆಯನ್ನು ಒದಗಿಸುವ ರಾಷ್ಟ್ರೀಯ ಅಂತರಾಷ್ಟ್ರೀಯ ಔದ್ಯೋಗಿಕ ಮೇಳಗಳಲ್ಲಿ ಭಾಗವಹಿಸುವ ಅವಕಾಶವನ್ನು ಮಾಡಿ ಕೊಡುವ ಮತ್ತು ಆ ಕುರಿತಾದ ಮಾಹಿತಿಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರುಕಟ್ಟೆಯಲ್ಲಿನ ಅವಕಾಶಗಳು ಹಾಗೂ ನಿಯಮಗಳ ಕುರಿತಾದ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಪಿಎಂಎಸ್ ಯೋಜನೆಯ ಪ್ರಕಾರ ಸಾಮಾನ್ಯ ವರ್ಗದ ಮಹಿಳೆಯರಿಂದ ನಡೆಸಲ್ಪಡುತ್ತಿರುವ ಉದ್ಯಮಗಳಲ್ಲಿನ ಕಟ್ಟಡ ಬಾಡಿಗೆಯಲ್ಲಿ ಶೇಕಡ 80 ಸಬ್ಸಿಡಿ ಪರಿಶಿಷ್ಟ ವರ್ಗ ಮತ್ತು ಪಂಗಡದ ಮಹಿಳೆಯರು ಪ್ರತಿಶತ ನೂರು ಸಬ್ಸಿಡಿಯನ್ನು ಪಡೆಯಲು ಅವಕಾಶವಿದೆ.

ಈ ಬೃಹತ್ ಮೇಳದಲ್ಲಿ 125ಕ್ಕೂ ಹೆಚ್ಚು ಉತ್ಪನ್ನಗಳ/ ಸೇವೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಮಹಿಳೆಯರಿಗೆ ಅವಕಾಶ ಇರುತ್ತದೆ. ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಲು ವಿಶಿಷ್ಟ ಆಹಾರ ಮಳಿಗೆಗಳು, ವಿಶೇಷ ಆಟದ ವಲಯ ಜೊತೆಗೆ ಬೇರೆ ಬೇರೆ ರೀತಿಯ ಸ್ಪರ್ಧೆಗಳು ನಡೆಯಲಿದೆ.

ಮಾರಾಟ ಮಳಿಗೆಗಳನ್ನು ಉತ್ತಮ ರೀತಿಯಲ್ಲಿ ರೂಪಿಸಲಾಗುತ್ತಿದೆ. ಮಳಿಗೆಯ ಗಾತ್ರ 10*10 ಆಗಿದ್ದು ವಿದ್ಯುತ್ ಸಂಪರ್ಕ, ತಂತ್ರಜ್ಞಾನ ಆಧಾರಿತ ಹಣ ಪಾವತಿಸುವ ವ್ಯವಸ್ಥೆ, ಬೆಳಕು, ನೀರಿನ ವ್ಯವಸ್ಥೆ, ಶೌಚಾಲಯ ವಾಹನ ನಿಲುಗಡೆಯ ವ್ಯವಸ್ಥೆ ಜೊತೆಗೆ ವಸ್ತ್ರ ಬದಲಾಯಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಹಾಗೂ ಅಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ.

ಈ ಮಾರುಕಟ್ಟೆ ಮೇಳದ ಆಯೋಜನೆಗೆ ದೇಣಿಗೆಯನ್ನು ನೀಡುವುದರ ಮೂಲಕ ವಿವಿಧ ಕಂಪನಿಗಳು ಹಾಗೂ ಸಂಸ್ಥೆಗಳು ತಮ್ಮ ಉತ್ಪನ್ನ/ ಸೇವೆಗಳನ್ನು ಪ್ರಸ್ತುತಪಡಿಸಲು ಜೊತೆಗೆ ಪ್ರಚಾರ ಪಡಿಸಲು ಅತ್ಯುತ್ತಮ ಅವಕಾಶ ಇರುತ್ತದೆ. ಪ್ಲ್ಯಾಟಿನಂ ದೇಣಿಗೆಯಾಗಿ 3,00,000/- ಡೈಮಂಡ್ ದೇಣಿಗೆಯಾಗಿ 1,50000/- ಗೋಲ್ಡ್ ದೇಣಿಗೆಯಾಗಿ 75,000/- ಸಿಲ್ವರ್ ದೇಣಿಗೆಯಾಗಿ 50,000/- ಬ್ರಾಂಚ್ ದೇಣಿಗೆಯಾಗಿ 25000/-
ಸ್ವೀಕರಿಸಲಾಗುತ್ತದೆ. ಕಾರ್ಯಕ್ರಮದ ಯಶಸ್ವಿಗಾಗಿ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.