ಕುಂದಾಪುರ: ಇಲ್ಲಿನ ಚಾಂತಾರಿನ ಚಾನ್ ಸ್ಟಾರ್ ಯೂತ್ ಕ್ಲಬ್ ಇದರ ರಜತ ಮಹೋತ್ಸವ ಕಾರ್ಯಕ್ರಮವು ಜನವರಿ 22 ಭಾನುವಾರದಂದು ಚ್ಯವನ ಋಷಿಗಳ ನಾಡಾದ ಚಾಂತಾರಿನ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
25 ವರ್ಷಗಳ ಸಾರ್ಥಕ ಸ್ನೇಹ ಪಯಣದ ನೆನಪಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ 25 ಜನ ಸಾಧಕರನ್ನು ಸನ್ಮಾನಿಸಲಾಗುವುದು ಹಾಗೂ ಶರಣ್ಯ ಚಾಂತಾರು ಇವರ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಲಾಗುವುದು.
ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಬಸ್ರೂರು, ಕೋಟ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ ಸಿ ಕುಂದರ್, ಶಾಸಕ ರಘುಪತಿ ಭಟ್, ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ , ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಿರುತೆರೆ ನಿರ್ದೇಶಕ ಆರೂರು ಜಗದೀಶ್, ಮೀನಿಗಾರರ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಪೂಜಾರಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಲೋಕಕಲ್ಯಾಣಾರ್ಥವಾಗಿ ಚಂಡಿಕಾಯಾಗವನ್ನು ಏರ್ಪಡಿಸಲಾಗಿದ್ದು ಬೆಳಗ್ಗೆ 10 ಗಂಟೆಗೆ ಪೂರ್ಣಾಹುತಿ ನಡೆಯಲಿದೆ.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು:
ಸಂಜೆ 6 ಗಂಟೆಯಿಂದ ಅಂಗಡಿಬೆಟ್ಟಿನ ಸರ್ಕಾರಿ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ, ಎಂಡಿಸಿ ಡ್ಯಾನ್ಸ್ ಕ್ರೇವ್ ತಂಡದಿಂದ ನೃತ್ಯ, ಕಲಾಚಿಗುರು ತಂಡದಿಂದ ಹೆಂಗ್ಸ್ ಪಂಚೇತಿ ನಗೆ ಹಬ್ಬ, ಸಾಲಿಗ್ರಾಮ ಗುರುಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಚಂದ್ರಮುಖಿ ಪ್ರಾಣಸಖಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.