ಉಡುಪಿ: ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಎಲ್ಲಾ ಕ್ಯಾಂಪ್ಕೋ ಸದಸ್ಯರ ಮೂಲಕ ಪಶ್ಚಿಮಘಟ್ಟ ತಪ್ಪಲಿನ ಔಷಧೀಯ ಸಸ್ಯಗಳ ಬೆಳೆಗೆ ಎಲ್ಲಾ ರೀತಿಯ ಅಗತ್ಯ ಪ್ರೋತ್ಸಾಹ ನೀಡುವುದಾಗಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಹೇಳಿದರು.
ಅವರು ಗುರುವಾರ ಕಾರ್ಕಳ ತಾಲೂಕು ಬಜಗೋಳಿಯ ತ್ರಿಭುವನ ಮಾಳದಲ್ಲಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕಾಂಪ್ಕೋ ಮಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ ಪ್ರಾಯೋಜಿತ ಯೋಜನೆ ಅಡಿಯಲ್ಲಿ ನಡೆದ ಪಶ್ಚಿಮ ಘಟ್ಟದ ತಪ್ಪಲಿನ ಔಷಧಿ ಸಸ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಡಿಕೆಯ ಜೊತೆಗೆ ತೋಟಗಳಲ್ಲಿ ಔಷಧಿಯ ಸಸ್ಯಗಳನ್ನು ಬೆಳೆಸಿ, ಅವುಗಳ ಮಾರಾಟದಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದ್ದು, ಈ ಬಗ್ಗೆ ಕ್ಯಾಂಪ್ಕೋದ 1.30 ಲಕ್ಷಕ್ಕೂ ಅಧಿಕ ಸದಸ್ಯರಿಗೆ ಮಾಹಿತಿ ನೀಡಲಾಗುವುದು. ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸೇರಿದಂತೆ ಅರಣ್ಯವನ್ನು ಉಳಿಸಿ ಬೆಳೆಸುವುದು ಅರಣ್ಯ ಇಲಾಖೆ ಮಾತ್ರವಲ್ಲದೆ ಪ್ರತಿಯೊಬ್ಬ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಅರಣ್ಯದಲ್ಲಿ ಗಣಿಗಾರಿಕೆ ನಡೆಯುವುದನ್ನು ತಡೆಯಬೇಕು. ಅರಣ್ಯ ಪ್ರದೇಶದ ಅತಿಕ್ರಮಣ ಮತ್ತು ರೈತರ ಬೆಳೆಗಳಿಗೆ ಕಾಡುಪ್ರಾಣಿಗಳ ಹಾವಳಿ ತಡೆಯಲು ಸೂಕ್ತ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ್, ಔಷಧೀಯ ಸಸ್ಯಗಳು ಮತ್ತು ಆಯುರ್ವೇದದಲ್ಲಿ ಮನುಕುಲದ ಆರೋಗ್ಯ ಇದೆ. ಗಿಡಮೂಲಿಕಾ ಸಸ್ಯಗಳನ್ನು ಲ್ಯಾಬ್ಗಳಲ್ಲಿ ಸಂಸ್ಕರಿಸಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಚಿಕಿತ್ಸೆಯಲ್ಲಿ ಔಷಧಿಯಾಗಿ ಬಳಸುವುದು ಪ್ರಮುಖ ಆರ್ಥಿಕ ಚಟುವಟಿಕೆಯಾಗಿದ್ದು, ಈ ಔಷಧಗಳು ಮತ್ತು ಔಷಧ ಗಿಡದ ವಿವಿಧ
ಭಾಗಗಳು ವಿದೇಶಕ್ಕೂ ರಫ್ತು ಆಗುತ್ತಿದೆ. ಗಿಡಮೂಲಿಕೆ ಸಸ್ಯಗಳನ್ನು ರೈತರು ತಮ್ಮ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುವ ಮೂಲಕ ಹೆಚ್ಚಿನ ಆರ್ಥಿಕ ಲಾಭ ಪಡೆಯಬಹುದಾಗಿದೆ ಎಂದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಅನಿತ ಎಸ್ ಅರೇಕಲ್ ಮಾತನಾಡಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದ, ಪ್ರಕೃತಿಗೆ ಪೂರಕವಾದ ಚಿಕಿತ್ಸೆ ನೀಡುವ ಆಯುರ್ವೇದದಲ್ಲಿ ಔಷಧ ಗಿಡಮೂಲಿಕೆಗಳಿಗೆ ಅತ್ಯಂತ ಮಹತ್ವದ ಸ್ಥಾನ ಮತ್ತು ಬೇಡಿಕೆ ಇದೆ. ಔಷಧ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸುವ ಮೂಲಕ ಜೀವ ವೈವಿಧ್ಯತೆಯ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು. ಜೀವ ವೈವಿಧ್ಯ ನಾಶವಾದರೆ ಮಾನವ ಸಂಕುಲದ ಮೇಲೆ ಅದರ ದುಷ್ಪರಿಣಾಮ ಬೀರಲಿದೆ ಎಂದರು.
ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಇತ್ತೀಚೆಗೆ ನೇಮಕವಾದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ ಬಗ್ಗೆ ಹೆಚ್ಚಿನ ಪರಿಚಯ ಮೂಡಿಸುವುದು ಅಗತ್ಯವಾಗಿದೆ. ಅರಣ್ಯದಲ್ಲಿ ಗಸ್ತು ಸಂದರ್ಭದಲ್ಲಿ ಇಂತಹ ಸಸ್ಯಗಳ ಬೆಳವಣಿಗೆ ಮತ್ತು ರಕ್ಷಣೆಗೆ ಕಾರ್ಯಪ್ರವೃತ್ತರಾಗಬೇಕು. ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಅಧಿಕ ಸಂಖ್ಯೆಯ ಗಿಡಮೂಲಿಕಾ ಸಸ್ಯಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೈಲೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯಕಾನಂದಜಿ ಮಹಾರಾಜ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಕ್ಷಿತಾ ಶೆಟ್ಟಿ, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ ನಾಯಕ್, ನಿಟ್ಟೆ ವಿದ್ಯಾ ಸಂಸ್ಥೆಯ ಅಶೋಕ್ ಅಡ್ಯಂತಾಯ, ಕಾರ್ಯಕ್ರಮದ ಸಂಚಾಲಕ ಡಾ.ಸತ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಡಾ.ಪ್ರಭು ಸ್ವಾಗತಿಸಿದರು. ಭವನ್ ಕುಮಾರ್ ನಿರೂಪಿಸಿದರು.