ಸುರತ್ಕಲ್: ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆ; ಸೆಕ್ಷನ್ 144 ಜಾರಿ

ಸುರತ್ಕಲ್: ಇಲ್ಲಿನ ಕೃಷ್ಣಾಪುರ ಪ್ರದೇಶದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಜಲೀಲ್ ಎಂದು ಗುರುತಿಸಲಾಗಿದೆ. ಕೃಷ್ಣಾಪುರ ಪ್ರದೇಶದಲ್ಲಿ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದರು. ಘಟನೆ ವೇಳೆ ಜಲೀಲ್ ತನ್ನ ಅಂಗಡಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಹತ್ಯೆಯ ನಂತರ ಆ ಪ್ರದೇಶದಲ್ಲಿ ಆತಂಕ ಮನೆಮಾಡಿದ್ದು, ಆಸ್ಪತ್ರೆಯ ಹೊರಗೆಅಪಾರ ಜನಸ್ತೋಮ ನೆರೆದಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸುರತ್ಕಲ್, ಬಜ್ಪೆ, ಕಾವೂರು ಮತ್ತು ಪಣಂಬೂರು ಪ್ರದೇಶಗಳಲ್ಲಿ ಡಿಸೆಂಬರ್ 25 ರ ಭಾನುವಾರ ಬೆಳಿಗ್ಗೆ 6 ರಿಂದ ಡಿಸೆಂಬರ್ 27 ರ ಮಂಗಳವಾರ ಬೆಳಿಗ್ಗೆ 6 ರವರೆಗೆ ನಗರ ಪೊಲೀಸರು ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಅಲ್ಲದೆ ಈ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಮಂಗಳೂರು | ಚೂರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ಮೃತ್ಯು; ಆಸ್ಪತ್ರೆಗೆ ಪೊಲೀಸ್ ಕಮಿಷನರ್  ಭೇಟಿ | Eedina | ಈದಿನ

ನಗರ ಪೊಲೀಸ್ ಮುಖ್ಯಸ್ಥರ ಆದೇಶದಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಡಿಸೆಂಬರ್ 25 ಮತ್ತು ಡಿಸೆಂಬರ್ 26 ರಂದು ಈ ಪ್ರದೇಶಗಳಲ್ಲಿ ಕೈಗಾರಿಕೆಗಳ ಚಾಲನೆಗೆ ನಿರ್ಬಂಧಗಳನ್ನು ಘೋಷಿಸಲಾಗಿದೆ. ಆದೇಶದ ಪ್ರಕಾರ, ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳ ಕಾರ್ಮಿಕರಿಗೆ ಭಾನುವಾರ ಮತ್ತು ಸೋಮವಾರ ಸಂಜೆ 6 ಗಂಟೆಯ ಮೊದಲು ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ ಮತ್ತು ಸಂಜೆ 6 ರಿಂದ ಮರುದಿನ ಬೆಳಿಗ್ಗೆ 6 ರವರೆಗೆ ಸಿಬ್ಬಂದಿಗಳ ಓಡಾಟವನ್ನು ನಿರ್ಬಂಧಿಸಲಾಗಿದೆ.

ಕೊಲೆಯಾದ ಜಲೀಲ್ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಪೊಲೀಸರು ಜಲೀಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಮೃತದೇಹವನ್ನು ಸುರತ್ಕಲ್ ಮೂಲಕ ಬಿಗಿ ಪೊಲೀಸ್ ಭದ್ರತೆ ಮೂಲಕ ಕಾಟಿಪಳ್ಳಕ್ಕೆ ರವಾನಿಸಲಾಗಿದ್ದು, ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆ ನೋಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.