ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಬ್ಯಾಂಕ್ ಒಂದರಲ್ಲಿ ಕಳ್ಳರು 1 ಕೋಟಿ ರೂ ಮೌಲ್ಯದ ಚಿನ್ನಾಭರಣ ದೋಚಿರುವ ಬಗ್ಗೆ ವರದಿಯಾಗಿದೆ. 10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕ್ನ ಲಾಕರ್ ರೂಂ ಪ್ರವೇಶಿಸಿರುವ ಕಳ್ಳರು 1.8 ಕೆ.ಜಿ ಬಂಗಾರ ದೋಚಿದ್ದಾರೆ. ಇದರ ಮೌಲ್ಯ ಸುಮಾರು 1 ಕೋಟಿ ರೂ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ಅವರು 4 ಅಡಿ ಅಗಲ 10 ಅಡಿ ಉದ್ದದ ಸುರಂಗವನ್ನು ಅಗೆದಿದ್ದಾರೆ. ಈ ಮೂಲಕ ಚಿನ್ನ ಇಟ್ಟಿದ್ದ ಕೋಣೆಯನ್ನು ಪ್ರವೇಶಿಸಿ ಚಿನ್ನದ ಪೆಟ್ಟಿಗೆಯನ್ನು ಒಡೆದು ಚಿನ್ನ ದೋಚಿದ್ದಾರೆ. ಆದರೆ ₹ 32 ಲಕ್ಷದ ನಗದು ಪೆಟ್ಟಿಗೆಯನ್ನು ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿ ವಿಜಯ್ ಧುಲ್ ಹೇಳಿದ್ದಾರೆ.
ಕದ್ದ ಚಿನ್ನದ ಅಂದಾಜು ನೀಡಲು ಬ್ಯಾಂಕ್ ಅಧಿಕಾರಿಗಳು ಗಂಟೆಗಟ್ಟಲೆ ಸಮಯ ತೆಗೆದುಕೊಂಡರು ಎನ್ನಲಾಗಿದೆ.
ಪರಿಣಿತ ಅಪರಾಧಿಗಳ ಸಹಾಯದಿಂದ ಅಪರಾಧವನ್ನು ಕಾರ್ಯಗತಗೊಳಿಸಿರುವುದು ಬ್ಯಾಂಕ್ ಒಳಗಿನವರದ್ದೇ ಕೆಲಸವಾಗಿರಬಹುದು. ಸ್ಟ್ರಾಂಗ್ ರೂಮ್ನಿಂದ ಫಿಂಗರ್ಪ್ರಿಂಟ್ಗಳು ಸೇರಿದಂತೆ ಕೆಲವು ಲೀಡ್ಗಳನ್ನು ನಾವು ಕಂಡುಕೊಂಡಿದ್ದೇವೆ, ಇದು ದರೋಡೆಯನ್ನು ಭೇದಿಸಲು ಸಹಾಯ ಮಾಡುತ್ತದೆ ಎಂದು ಧುಲ್ ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.
Money Heist Kanpur: Thieves dug a tunnel to the strong room of State Bank of India's Bhauti branch in UP's Kanpur. They decamped after emptying the entire Gold chest where gold against which loan was taken by customers was kept. pic.twitter.com/5Bn1Enuu1q
— Piyush Rai (@Benarasiyaa) December 23, 2022
ಕಳ್ಳರು ಆ ಪ್ರದೇಶವನ್ನು ಸರಿಯಾಗಿ ಅಭ್ಯಸಿಸಿರಬೇಕು ಮತ್ತು ಸ್ಟ್ರಾಂಗ್ ರೂಮ್, ಬ್ಯಾಂಕ್ನ ನಿರ್ಮಾಣ ಮತ್ತು ವಾಸ್ತುಶಿಲ್ಪದ ಬಗ್ಗೆ ಪರಿಚಿತರಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಕಳ್ಳರು ಬ್ಯಾಂಕ್ ನ ಸ್ಟ್ರಾಂಗ್ ರೂಮ್ ಗೆ ಬಂದ ಸುರಂಗವನ್ನು ಬ್ಯಾಂಕ್ ಮರುದಿನ ಮುಂಜಾನೆ ಅಧಿಕಾರಿಗಳು ನೋಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನ ದಳ ಬ್ಯಾಂಕ್ಗೆ ಆಗಮಿಸಿ ತನಿಖೆ ಆರಂಭಿಸಿದ್ದು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಬಿಪಿ ಜೋಗ್ದಂಡ್ ಹೇಳಿದ್ದಾರೆ.