ಕಾರ್ಕಳ: ವಿದ್ಯಾರ್ಥಿ ಜೀವನ ಕಾಲೇಜಿನಲ್ಲೆ ಮುಗಿಯುವುದಿಲ್ಲ ಬದಲಿಗೆ ಜೀವನದುದ್ದಕ್ಕೂ ನಡೆಯುವಂತದ್ದು. ಹೊಸತನ್ನು ಸ್ವಾಗತಿಸುವ ಮನೋಭಾವ ಇರಬೇಕು. ಕಣ್ಣು–ಕಿವಿಗಳಿಗೆ ಸದಾ ಕಾತುರತೆ ಇರಬೇಕು. ನವೀನತೆಯನ್ನು ಸ್ವೀಕರಿಸುವ ಮನೋಭಾವ ಚೈತನ್ಯವಾಗಿ ಜೀವಂತವಾಗಿದ್ದಾಗ ವ್ಯಕ್ತಿಯು ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನ ಸಂಭ್ರಮ-2022 ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು ಹಾಗೂ ವಕೀಲರ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ಕಾಲಕಾಲಕ್ಕೆ ಕಾನೂನು- ಕಾಯಿದೆಗಳು ಬದಲಾಗುತ್ತಿರುತ್ತದೆ. ಹೊಸ-ಹೊಸ ರೋಗಗಳು ಉಲ್ಬಣಿಸಿದಂತೆ ನವೀನ ಆಲೋಚನೆಗಳಿಗೆ ನಮ್ಮನ್ನು ತೊಡಗಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕಾದದ್ದು ಅಗತ್ಯವಾಗಿದೆ. ಜ್ಞಾನದ ಆಗರದ ಸಾರಸ್ವತ ನೆಲ ನಮ್ಮದು. ನಾಡು ನುಡಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದ ಅವರು ಭಾರತ ವಿಶ್ವಕ್ಕೆ ನೀಡಿದ ಕೊಡುಗೆಯ ಬಗ್ಗೆ ನಾವು ಸದಾ ಋಣಿಯಾಗಿರಬೇಕು ಎಂದರು.
ಕಾಲೇಜಿನ ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಹಾಗೂ ಡಾ.ಪ್ರಜ್ವಲ್ ಕುಲಾಲ್ರವರ ಪಿ.ಎಚ್.ಡಿ ಮಾರ್ಗದರ್ಶಕಿಯಾದ ಮಂಗಳೂರು ವಿ.ವಿ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ವಿಶಾಲಾಕ್ಷಿ .ಬಿ.ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿ ಜ್ಞಾನದ, ವಿಜ್ಞಾನದ ಹೊಸ ಸಂಶೋಧನೆಯಲ್ಲಿ ನಮ್ಮನ್ನು ಪಳಗಿಸಬೇಕು. ರಾಷ್ಟ್ರ ಮೊದಲು ಅನ್ನುವುದರ ಜೊತೆಗೆ ಚಾರಿತ್ರ್ಯವಂತ ಗುಣವನ್ನು ಹೊಂದಿದ ಘನತೆ ಗೌರವದ ಮನ ವಿದ್ಯಾರ್ಥಿಗಳಲ್ಲಿ ಹೊರಹೊಮ್ಮಬೇಕು. ಹವ್ಯಾಸವು ಆಸಕ್ತಿಯಾದಾಗ ನಮ್ಮ ಕಾರ್ಯವು ಯಶಸ್ವಿಯಾಗಲು ಸಾಧ್ಯ. ಪ್ರಾಮಾಣಿಕ ಹಾಗೂ ದಕ್ಷ ಉಪನ್ಯಾಸಕರ ದುಡಿಮೆಯಿಂದ ವಿದ್ಯಾರ್ಥಿಗಳನ್ನು ಅತ್ಯುತ್ತಮ ಸ್ಥಾನಗಳಿಗೆ ಕಳುಹಿಸುತ್ತಿರುವ ಜ್ಞಾನಸುಧಾದ ಬದ್ಧತೆಯ ಕಾರ್ಯವೈಖರಿ ಅಭಿನಂದನೀಯ ಎಂದು ಪ್ರಶಂಶಿಸಿದರು.
ಈ ಸಂದರ್ಭ 2021-22ನೇ ಸಾಲಿನ ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಹಾಗೂ 2022-23ನೇ ಸಾಲಿನ ರಾಷ್ಟ್ರ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಗೊಂಡ 26 ಸಾಧಕ ಕ್ರೀಡಾಪಟುಗಳನ್ನು ಹಾಗೂ ಮೂವರು ಸಾಂಸ್ಕೃತಿಕ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು, ಡೀನ್ ಸ್ಟೂಡೆಂಟ್ಸ್ ಅಫೇರ್ ಶಕುಂತಲಾ.ಎಂ.ಸುವರ್ಣ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿ ಸಂಯೋಜಕ ಸಂದೀಪಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್ ವಾರ್ಷಿಕ ವರದಿಯನ್ನು ವಾಚಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ ಕ್ರೀಡಾ ಸಾಧಕರ, ಅರ್ಥಶಾಸ್ತ್ರ ಉಪನ್ಯಾಸಕಿ ಸುಮಿತ್ರಾ ಸಾಂಸ್ಕೃತಿಕ ಸಾಧಕರ, ಗಣಿತ ಶಾಸ್ತ್ರ ಉಪನ್ಯಾಸಕಿ ಕು.ಅಶ್ವಿನಿ ಶೈಕ್ಷಣಿಕ ಸಾಧಕರ ಪಟ್ಟಿಯನ್ನು ವಾಚಿಸಿದರು. ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಪ್ರಜ್ವಲ್ ಕುಲಾಲ್ ಕಾರ್ಯಕ್ರಮ
ನಿರೂಪಿಸಿ, ಉಪಪ್ರಾಂಶುಪಾಲ ಸಾಹಿತ್ಯ ಸ್ವಾಗತಿಸಿ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು.