ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ

ಡಿ.22 ರಂದು ಉತ್ತರಾಯಣವು ಆರಂಭವಾಗಿದ್ದು, ದೇಶದ ಹಲವು ರಾಜ್ಯಗಳು ಚಳಿಗಾಲವನ್ನು ಎದುರಿಸಲು ಸಜ್ಜಾಗುತ್ತಿವೆ. ಚಳಿಗಾಲದಲ್ಲಿ ಚರ್ಮ, ಕೂದಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ. ಮಾತ್ರವಲ್ಲದೆ, ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳು ಬರುತ್ತಿದ್ದು, ಭಾರತವೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ದಿನನಿತ್ಯದ ಆಹಾರಪದ್ದತಿಯಲ್ಲಿ ಅಳವಡಿಸಿಕೊಳ್ಳುವುದು ಕ್ಷೇಮ.

ಚಳಿಗಾಲದಲ್ಲಿ ಸೇವಿಸಬಹುದಾದ ಆಹಾರಗಳು

ಬೆಲ್ಲ
ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದ ಭಾಗವಾಗಿಸುವುದು ಉಪಯುಕ್ತ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಸಕ್ಕರೆಯ ಬದಲಿಯಾಗಿ ಬೆಲ್ಲವನ್ನು ಬಳಸಬಹುದು. ಬೆಲ್ಲದಿಂದ ತಯಾರಿಸಿದ ಚಿಕ್ಕಿ, ಲಡ್ಡು ಮುಂತಾದವುಗಳನ್ನು ಸೇವಿಸಬಹುದು.

ಎಳ್ಳು
ಚಳಿಗಾಲದಲ್ಲಿ ತಿನ್ನಲೇಬೇಕಾದ ವಸ್ತು ಇದು. ಎಳ್ಳು ದೇಹವನ್ನು ಬೆಚ್ಚಗಿಡುತ್ತದೆ ಮತ್ತು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ಸತು ಮತ್ತು ಕಬ್ಬಿಣಾಂಶ ಹೆಚ್ಚಿದ್ದು, ರಕ್ತ ಉತ್ಪಾದನೆಗೆ ಒಳ್ಳೆಯದು. ಅದಕ್ಕಿಂತ ಹೆಚ್ಚಾಗಿ, ಎಳ್ಳು ರಕ್ತದಲ್ಲಿನ ಒಳ್ಳೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ತನ್ಮೂಲಕ, ಚಳಿಗಾಲದಲ್ಲಿ ಹೆಚ್ಚು ಅಗತ್ಯವಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಎಳ್ಳುಂಡೆ, ಏಳ್ಳಿನ ಜ್ಯೂಸ್ ಮುಂತಾದವುಗಳನ್ನು ಚಳಿಗಾಲದಲ್ಲಿ ಸೇವಿಸಬಹುದು.

20 Winter Food In India to Keep You Warm in 2022

ಖರ್ಜೂರ
ಖರ್ಜೂರದಲ್ಲಿ ಕಬ್ಬಿಣ, ಮೆಗ್ನೀಸಿಯಮ್, ತಾಮ್ರ ಮುಂತಾದ ಅಗತ್ಯ ಪೋಷಕಾಂಶಗಳಿವೆ. ಇವು ನಾರು ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಖರ್ಜೂರವನ್ನು ನೈಸರ್ಗಿಕ ಸಿಹಿಕಾರಕವಾಗಿ ಪರಿಗಣಿಸಲಾಗುತ್ತದೆ ಮತ್ತು ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಖರ್ಜೂರ ಹಲ್ವ, ಪಾಯಸ ಮುಂತಾದ ರೀತಿಯಲ್ಲಿ ಇದನ್ನು ಸೇವಿಸಬಹುದು.

ಹಸಿರು ಸೊಪ್ಪು
ಹಸಿರು ಸೊಪ್ಪು ತರಕಾರಿಗಳಾದ ಮೆಂತ್ಯ, ಪಾಲಕ್, ಸಾಸಿವೆ, ಸಬ್ಬಸ್ಸಿಗೆ ಸೊಪ್ಪು ಮುಂತಾದವುಗಳನ್ನು ಸೇವಿಸುವುದು ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ಹಸಿರು ಸೊಪ್ಪು ತರಕಾರಿಗಳು ದೇಹ ತೂಕವನ್ನು ಮತ್ತು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತವೆ.

ಕೇಸರಿ
ಮಸಾಲೆಗಳಲ್ಲಿ ಅತ್ಯಂತ ದುಬಾರಿ ಎನಿಸಿರುವ ಕೇಸರಿಯ ಸೇವನೆಯು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಾಗಿಸುತ್ತದೆ. ಇದು ಚರ್ಮವನ್ನು ರಕ್ಷಿಸುತ್ತದೆ, ತೂಕ ಕಡಿತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ಮತ್ತು ಅಲ್ಝೈಮರ್ಸ್ ರೋಗಗಳಲ್ಲಿ ಪರಿಣಾಮಕಾರಿಯಾಗಿದೆ. ಬಿಸಿ ಹಾಲಿಗೆ ಒಂದೆರಡು ಕೇಸರಿಯ ಕುಸುಮಗಳನ್ನು ಹಾಕಿ ಸೇವಿಸುವುದು ದೇಹ ಮತ್ತು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.

Home remedy: 9 Indian spices that can ward off winter sickness | Health -  Hindustan Times

ಶುಂಠಿ
ಶುಂಠಿ ಅಸ್ಥಿಸಂಧಿವಾತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಶುಂಠಿಯ ಉತ್ತಮ ಅಂಶವೆಂದರೆ ಅದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಇದು ಅಜೀರ್ಣವನ್ನು ನಿವಾರಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಶುಂಠಿ ಚಹಾವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು.

ತುಪ್ಪ
ದ್ರವ ರೂಪದ ಚಿನ್ನವೆಂದು ಕರೆಯಲ್ಪಡುವ ತುಪ್ಪವು ಭಾರತೀಯ ಸಾಂಪ್ರದಾಯಿಕ ಅಡುಗೆಗಳ ಆತ್ಮವೆಂದೆ ಹೇಳಬಹುದು. ತುಪ್ಪವು ವಿಟಮಿನ್‌ಗಳ ಅತ್ಯುತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಕೀಲುಗಳ ಆರೋಗ್ಯಕ್ಕೆ ಉತ್ತಮ. ಮನುಷ್ಯನ ಮೇಧಾ ಶಕ್ತಿಯನ್ನು ತುಪ್ಪವು ಹೆಚ್ಚಿಸುತ್ತದೆ. ಬಿಸಿ ಗಂಜಿಗೆ ಒಂದು ಚಮಚ ಹಸುವಿನ ಶುದ್ದ ತುಪ್ಪ ಹಾಕಿಕೊಂಡು ಉಂಡರೆ ಅದುವೆ ಪರಮಾನ್ನ. ತುಪ್ಪವು ಚರ್ಮದ ಆರೋಗಕ್ಕೂ ಒಳ್ಳೆಯದು. ತುಪ್ಪದಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳಿತು.

ಸಾಸಿವೆ
ನಾರು, ಸತು ಮತ್ತು ಸೆಲೆನಿಯಂನಲ್ಲಿ ಸಮೃದ್ಧವಾಗಿರುವ ಸಾಸಿವೆ ಬೀಜಗಳು ವಿಟಮಿನ್ ಸಿ, ಕೆ ಮತ್ತು ಎ ನ ಉತ್ತಮ ಮೂಲವಾಗಿದೆ. ಸಾಸಿವೆ ಯನ್ನು ದಿನನಿತ್ಯದ ಆಹಾರ ಪದ್ದತಿಯಲ್ಲಿ ಯಾವುದಾದರೊಂದು ರೀತಿಯಲ್ಲಿ ಬಳಸಬಹುದು.

ಏಲಕ್ಕಿ
ಮಸಾಲೆಗಳ ರಾಣಿ ಏಲಕ್ಕಿ, ಭಾರತೀಯರು ತಮ್ಮ ಆಹಾರ ಮತ್ತು ಸಿಹಿತಿಂಡಿಗಳಲ್ಲಿ ನಿಯಮಿತವಾಗಿ ಬಳಸುವ ಮಸಾಲೆ. ಏಲಕ್ಕಿಯು ರಕ್ತದ ಹರಿವನ್ನು ನಿಯಂತ್ರಿಸುವ, ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಮತ್ತು ರಕ್ತವನ್ನು ನಿರ್ವಿಷಗೊಳಿಸುವ ಗುಣ ಹೊಂದಿದೆ. ಏಲಕ್ಕಿ ಚಹಾ, ಏಲಕ್ಕಿಯಿಂದ ಮಾಡಿದ ಸಿಹಿ ಪದಾರ್ಥಗಳನ್ನು ಸೇವಿಸಬಹುದು.

ಒಣಹಣ್ಣುಗಳು

ಪಿಸ್ತಾ, ಬಾದಾಮ್, ಗೋಡಂಬಿ, ವಾಲ್ ನಟ್ ಮುಂತಾದ ಒಣಹಣ್ಣುಗಳ ಸೇವನೆಯು ಚಳಿಗಾಲದಲ್ಲಿ ದೇಹಕ್ಕೆ ಪೋಶಕಾಂಶಗಳನ್ನು ನೀಡುತ್ತದೆ. ನೆಲಗಡಲೆ ಬೀಜವೂ ಕೂಡಾ ಚಳಿಗಾದಲ್ಲಿ ದೇಹಕ್ಕೆ ಅವಶ್ಯವಾದ ಪೋಶಕಾಂಶಗಳನ್ನು ನೀಡುತ್ತದೆ.

ಚಳಿಗಾಲದಲ್ಲಿ ನೀವು ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ತಪ್ಪಿಸಬೇಕು ಏಕೆಂದರೆ ಅವು ನಿಮ್ಮ ತೂಕವನ್ನು ಸುಲಭವಾಗಿ ಹೆಚ್ಚಿಸಬಹುದು. ಬ್ರೆಡ್, ಬೀನ್ಸ್, ಹಾಲು, ಪಾಪ್‌ಕಾರ್ನ್, ಆಲೂಗಡ್ಡೆ, ಬಿಸ್ಕತ್ತು, ಸ್ಪೆಗೆಟ್ಟಿ, ತಂಪು ಪಾನೀಯಗಳು, ಜೋಳ, ಚೀಸ್, ಮೊಸರಿನಂತಹ ಆಹಾರವನ್ನು ತಪ್ಪಿಸಬಹುದು.

Seasonal Fruits in India (Summer, Monsoon, Winter) & Benefits - HealthifyMe

ನಮ್ಮ ದೇಹಕ್ಕೆ ಬೇಕಾದ ಆಹಾರಗಳು ಋತುಮಾನಕ್ಕನುಗುಣವಾಗಿ ಪ್ರಕೃತಿಯಲ್ಲೇ ಬೆಳೆಯುತ್ತದೆ. ಚಳಿಗಾಲದಲ್ಲಿ ಬೆಳೆಯುವ ಕಿತ್ತಲೆ ಹಣ್ಣು, ಸ್ಟ್ರಾಬೆರಿ, ಹಸಿ ಬಟಾಣಿ ಕಾಳು, ದ್ರಾಕ್ಷಿ ಮುಂತಾದವುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಗಳ ಅಂಶವು ನೈಸರ್ಗಿಕವಾಗಿ ದೊರೆಯುತ್ತದೆ.

ಚಳಿಗಾಲದಲ್ಲಿಆರೋಗ್ಯಕರ ಸೂಪ್‌ಗಳು, ಕ್ಯಾರೆಟ್, ಬೀಟ್ ರೂಟ್ ನಂತಹ ಗೆಡ್ಡೆ ತರಕಾರಿಗಳನ್ನು ಸೇವಿಸಬಹುದು ಮತ್ತು ಮೀನು, ಮೊಟ್ಟೆ ಮತ್ತು ವಿಟಮಿನ್ 12 ಸಮೃದ್ಧವಾಗಿರುವ ಆಹಾರವನ್ನು ಒಳಗೊಂಡಿರುವ ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರವನ್ನು ತೆಗೆದುಕೊಳ್ಳಬಹುದು. ಶೀತ ವಾತಾವರಣವು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ಆಹಾರವು ದೇಹಕ್ಕೆ ಶಕ್ತಿಯನ್ನು ಸೇರಿಸುವ ಮೂಲಕ ನಮ್ಮನ್ನು ಬೆಚ್ಚಗಾಗಿಸುತ್ತದೆ. ಬಿಸಿ ನೀರಿನ ಸೇವನೆಯು ದೇಹವನ್ನು ಬೆಚ್ಚಗಿಡುವಲ್ಲಿ ಸಹಕಾರಿ.