ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಬ್ರಹ್ಮಕಲಶೋತ್ಸವ ಮತ್ತು ಐತಿಹಾಸಿಕ ಸುವರ್ಣ ಗೋಪುರ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಹಸಿರು ಹೊರೆ ಕಾಣಿಕೆ ಸಮರ್ಪಣೆ ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ನಡೆಯಿತು. ಕೆಎಂ ಮಾರ್ಗ, ಸಂಸ್ಕೃತ ಕಾಲೇಜು ರಸ್ತೆಯಿಂದ ಮೆರವಣಿಗೆ ಮೂಲಕ ಮೆರವಣಿಗೆ ಸಾಗಿತು.
ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ನಾಡಿನ ವಿವಿಧ ಭಾಗಗಳಿಂದ ಭಕ್ತಾದಿಗಳು ಹೊರೆಕಾಣಿಕೆ ನೀಡಿದ್ದು, ಮಂಗಳೂರು, ಸುರತ್ಕಲ್, ನೀಲಾವರ, ಬೈಕಾಡಿ, ಬ್ರಹ್ಮಾವರ ಸೇರಿದಂತೆ ಭಾಗಗಳಿಂದ 100ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಹರಿದು ಬಂದಿದೆ. ವಿಕಲಚೇತನರ ಸಂಘದ ಜಗದೀಶ್ ಭಟ್ ನೇತೃತ್ವದಲ್ಲಿ 9 ತ್ರೀಚಕ್ರ ವಾಹನದಲ್ಲಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಭಜರಂಗದಳ-ವಿಎಚ್ ಪಿ, ದುರ್ಗಾವಾಹಿನಿ ಉಡುಪಿ ಜಿಲ್ಲೆ, ನಗರದ ವಿವಿಧ ಸಂಘಸಂಸ್ಥೆಗಳು ಹೊರೆಕಾಣಿಕೆ ನೀಡಿದವು. ಪೇಜಾವರ ಮುಸ್ಲೀಂ ಅಭಿಮಾನಿ ಬಳಗದವರಿಂದಲೂ ಹೊರೆಕಾಣಿಕೆ ಸಮರ್ಪಿಸಿದರು.
ಹೊರೆಕಾಣಿಕೆಯಲ್ಲಿ ವಿವಿಧ ತರಕಾರಿ ವಸ್ತುಗಳು, ಅಕ್ಕಿ, ಬೆಲ್ಲ, ಎಣ್ಣೆ, ಬಾಳೆ, ಹಣ್ಣು ಹಂಪಲು ಮೊದಲಾದ ವಸ್ತುಗಳನ್ನು ಅಲಂಕೃತ ವಾಹನಗಳಲ್ಲಿ ತರಲಾಯಿತು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುವ ಬ್ರಾಹ್ಮಣ ಪರಿಷತ್ತಿನ ವಿಷ್ಣು ಪ್ರಸಾದ್ ಪಾಡಿಗಾರು, ಮಟ್ಟು ಲಕ್ಷ್ಮೀನಾರಯಣ ರಾವ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ, ಕಟೀಲು ದೇವಳ ಪ್ರಧಾನ ಅರ್ಚಕ ಲಕ್ಷ್ಮೀನಾರಯಣ ಅಸ್ರಣ್ಣ, ಬಜರಂಗದಳ ವಿಎಚ್ ಪಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.