ಮಹಿಳೆಯರ ಉನ್ನತ ಶಿಕ್ಷಣ ನಿಷೇಧಿಸಿದ ತಾಲಿಬಾನ್: ಪರೀಕ್ಷೆ ಬಹಿಷ್ಕರಿಸಿ ಒಗ್ಗಟ್ಟು ಪ್ರದರ್ಶಿಸಿದ ವಿದ್ಯಾರ್ಥಿಗಳು

ಕಾಬುಲ್: ಅಫ್ಘಾನಿಸ್ತಾನದ ನಂಗರ್‌ಹಾರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಾಲಿಬಾನ್‌ ಸರ್ಕಾರದ ಮಹಿಳೆಯರ ಶಿಕ್ಷಣ ನಿಷೇಧ ನಿರ್ಧಾರದ ವಿರುದ್ದ ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿನಿಯರ ಜೊತೆ ಒಗ್ಗಟ್ಟಿನ ಪ್ರದರ್ಶನದಲ್ಲಿ ತಮ್ಮ ಪರೀಕ್ಷೆಗಳನ್ನು ಬಹಿಷ್ಕರಿಸಿ ತರಗತಿಗಳಿಂದ ಹೊರನಡೆದಿದ್ದಾರೆ.

ನಂಗರ್‌ಹಾರ್ ಮತ್ತು ಕಂದಹಾರ್‌ನಲ್ಲಿ ವಿದ್ಯಾರ್ಥಿಗಳು ತಾಲಿಬಾನ್ ಆದೇಶದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದ್ದಾರೆ. ತಾಲಿಬಾನ್‌ನ ಉನ್ನತ ಶಿಕ್ಷಣ ಸಚಿವಾಲಯವು ಮಹಿಳಾ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲಿನ ಇತ್ತೀಚಿನ ದಬ್ಬಾಳಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣದ ಮೇಲೆ ಅನಿರ್ದಿಷ್ಟಾವಧಿಯ ನಿಷೇಧವನ್ನು ಆದೇಶಿಸಿದ್ದು, ಇದು ಅಂತರರಾಷ್ಟ್ರೀಯ ಖಂಡನೆಗೆ ಕಾರಣವಾಗಿದೆ.

ಕಳೆದ ವರ್ಷ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ತಾಲಿಬಾನ್ ಸರ್ಕಾರವು ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಾದ ವ್ಯಾಖ್ಯಾನವನ್ನು ವ್ಯಾಪಕವಾಗಿ ಜಾರಿಗೆ ತಂದಿದೆ. ಮಧ್ಯಮ ಶಾಲೆ ಮತ್ತು ಪ್ರೌಢಶಾಲೆಯಿಂದ ಹುಡುಗಿಯರನ್ನು ನಿಷೇಧ, ಉದ್ಯೋಗದಿಂದ ಮಹಿಳೆಯರ ನಿರ್ಬಂಧ ಮತ್ತು ಸಾರ್ವಜನಿಕವಾಗಿಸಂಪೂರ್ಣ ಮೈಮುಚ್ಚುವ ಬಟ್ಟೆ ಧರಿಸಲು ಆದೇಶ ಮುಂತಾದ ಕ್ರಮಗಳನ್ನು ತಾಲಿಬಾನ್ ಜಾರಿಗೊಳಿಸಿದೆ. ಪುರುಷರಿಲ್ಲದೆ ಉದ್ಯಾನವನಗಳು ಮತ್ತು ಜಿಮ್‌ಗಳಲ್ಲಿಯೂ ಮಹಿಳೆಯರು ಅಡ್ಡಾಡುವಂತಿಲ್ಲ. ಇದೀಗ ಉನ್ನತ ಶಿಕ್ಷಣದಿಂದಲೂ ಮಹಿಳೆಯರನ್ನು ವಂಚಿತರನ್ನಾಗಿಸಿ ಕಲಿಕೆಯ ಮೇಲೆ ನಿಷೇಧ ಹೇರಲಾಗಿದೆ.

ತಾಲಿಬಾನ್ ಸರ್ಕಾರದ ಈ ನಡೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.