ನವದೆಹಲಿ: ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್, ಚೀನಾ ಮತ್ತು ಅಮೇರಿಕಾದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಹೊಸ ಏರಿಕೆಯ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಬುಧವಾರ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಸನ್ನಿವೇಶವನ್ನು ಪರಿಗಣಿಸಿ ಸಚಿವರು ಬುಧವಾರದಂದು ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.
ಮಂಗಳವಾರದಂದು, ಆರೋಗ್ಯ ಸಚಿವಾಲಯವು ಹೊಸ ರೂಪಾಂತರಗಳ ಬಗ್ಗೆ ನಿಗಾ ಇಡಲು ಸಕಾರಾತ್ಮಕ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಪತ್ತೆ ಹಚ್ಚಲು ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇಂತಹ ಉಪಕ್ರಮಗಳು ದೇಶದಲ್ಲಿ ಪ್ರಸಾರವಾಗುತ್ತಿರುವ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಮತ್ತು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಪರೀಕ್ಷೆ-ನಿಗಾ-ಚಿಕಿತ್ಸೆ-ಲಸಿಕೀಕರಣ ಮತ್ತು ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆಯ ಐದು ತಂತ್ರದ ಮೇಲೆ ಕೇಂದ್ರೀಕರಿಸಿದ್ದರಿಂದ ಭಾರತವು ಕರೋನವೈರಸ್ ಹರಡುವಿಕೆಯನ್ನು ನಿರ್ಬಂಧಿಸಲು ಸಮರ್ಥವಾಗಿದೆ ಮತ್ತು ಪ್ರತಿ ವಾರ ಸುಮಾರು 1,200 ಪ್ರಕರಣ ವರದಿಯಾಗುತ್ತಿವೆ. ಕೋವಿಡ್ -19 ರ ಸಾರ್ವಜನಿಕ ಆರೋಗ್ಯ ಸವಾಲು ಪ್ರಪಂಚದಾದ್ಯಂತ ಇನ್ನೂ ಮುಂದುವರೆದಿದ್ದು, ವಾರಕ್ಕೆ ಸುಮಾರು 35 ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ ಎಂದು ಭೂಷಣ್ ಹೇಳಿದ್ದಾರೆ.
ಈ ಮಧ್ಯೆ ಲಾಕ್ ಡೌನ್ ತೆರವುಗೊಳಿಸಿದ್ದರಿಂದ ಚೀನಾದಲ್ಲಿ ಕೋವಿಡ್ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಚೀನಾದ ಆಸ್ಪತ್ರಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಜಗತ್ತಿನೆಲ್ಲೆಡೆ ಆತಂಕ ಹೆಚ್ಚಾಗುತ್ತಿದೆ.












