2 ಪ್ರತ್ಯೇಕ ದಾಳಿಯಲ್ಲಿ ನಾಲ್ಕು ಟಿಪ್ಪರ್; 20 ಮೆಟ್ರಿಕ್ ಟನ್ ಅಕ್ರಮ ಮರಳು ವಶ: ಗಣಿ ಇಲಾಖಾಧಿಕಾರಿಗಳಿಂದ ಕ್ಷಿಪ್ರ ಕಾರ್ಯಾಚರಣೆ

ಕುಂದಾಪುರ: ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಮೊವಾಡಿ ಪರಿಸರದಲ್ಲಿ ಪರವಾನಿಗೆ ರಹಿತವಾಗಿ ಮರಳು ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ. ಯು ಅವರ ಮಾರ್ಗದರ್ಶನದಲ್ಲಿ ಸೋಮವಾರ (ಡಿ.19) ಮದ್ಯಾಹ್ನ 12.30ಕ್ಕೆ ಭೂ ವಿಜ್ಞಾನಿ ಸಂಧ್ಯಾ ಅವರು ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಮೋವಾಡಿ ಪರಿಸರದಲ್ಲಿ ಕಾರ್ಯಚಾರಣೆ ನಡೆಸಿ ಪರವಾನಿಗೆ ರಹಿತವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ ಮರಳು ಸಹಿತ 2 ಟಿಪ್ಪರ್ ಲಾರಿ ವಶಕ್ಕೆ ಪಡೆದುಕೊಂಡಿದ್ದಾರೆ. ಭೂವಿಜ್ಞಾನಿಯವರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ವಹಿಸುವವರೆಗೆ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ ಲಾರಿಗಳನ್ನು ಗಂಗೊಳ್ಳಿ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ‌.

ಮತ್ತೊಂದು ಕಾರ್ಯಾಚರಣೆಯಲ್ಲಿ ಡಿ. 20 ಮಂಗಳವಾರದಂದು ಮುಂಜಾನೆ ಕುಂದಾಪುರ ತಾಲೂಕು ವಂಡ್ಸೆ ಹೋಬಳಿ ಶಂಕರನಾರಾಯಣ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಎರಡು ಕಡೆ ಕಾರ್ಯಾಚರಣೆ ನಡೆಸಿ 2 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ‌.

ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ಕು ಲಾರಿಗಳಲ್ಲಿ 20 ಮೆಟ್ರಿಕ್ ಟನ್ ಅಕ್ರಮ ಮರಳು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮರಳುಗಾರಿಕೆ ಬಗ್ಗೆ ಸಾರ್ವಜನಿಕರಿಂದ ಅವ್ಯಾಹತ ದೂರುಗಳು

ಜಿಲ್ಲೆಯ ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಶಂಕರನಾರಾಯಣ ವ್ಯಾಪ್ತಿಯಲ್ಲಿ ಹಲವೆಡೆ ವಾರಾಹಿ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ.ಯು ಅವರ ಮಾರ್ಗದರ್ಶನದಲ್ಲಿ ಮಂಗಳವಾರ ಮುಂಜಾನೆ 6.30ಕ್ಕೆ ಭೂವಿಜ್ಞಾನಿ ಸಂಧ್ಯಾ ಅವರು ಶಂಕರನಾರಾಯಣ ಗ್ರಾಮದ ಕೈಯಾಣಿ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಮರಳು ದಕ್ಕೆಯಲ್ಲಿ ಮರಳು ತುಂಬಿ ನಿಂತಿದ್ದ ಒಂದು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂಂದು ಪ್ರಕರಣದಲ್ಲಿ ಸಮಯ ಮುಂಜಾನೆ 07:00ಕ್ಕೆ ಶಂಕರನಾರಾಯಣ – ಹಾಲಾಡಿ ರಸ್ತೆಯಲ್ಲಿ ಪರವಾನಿಗೆ ರಹಿತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಒಂದು ಟಿಪ್ಪರ್ ಅನ್ನು ವಶಕ್ಕೆ ಪಡೆದಿದ್ದಾರೆ. ಕೈಯಾಣಿ ಪರಿಸರದಲ್ಲಿನ ಅನಧಿಕೃತ ಮರಳು ದಕ್ಕೆಗೆ ದಾಳಿಯಾಗುತ್ತಿದ್ದಂತೆ, ಶಂಕರನಾರಾಯಣ ವ್ಯಾಪ್ತಿಯ ಭರತ್ಕಲ್, ಕ್ರೊಡ ಬೈಲೂರು ಹಾಗೂ ಮಚ್ಚಟ್ಟು ಗ್ರಾಮದ ಹೆಮ್ಮಣ್ಣು, ಕಳಿನಜೆಡ್ಡು ವ್ಯಾಪ್ತಿಯಲ್ಲಿ ಅನಧಿಕೃತ ಮರಳುಗಾರಿಕೆಯನ್ನು ನಡೆಸುತ್ತಿದ್ದವರು ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಸ್ಥಗಿತಗೊಳಿಸಿ ಸ್ಥಳದಿಂದ ಪರಾರಿಯಾಗಿರುತ್ತಾರೆ.

ಅನಧಿಕೃತ ಮರಳು ಗಣಿಗಾರಿಕೆಗೆ ದಕ್ಕೆ ಹಾಗೂ ಸಾಗಾಣಿಕೆಗೆ ರಸ್ತೆಯನ್ನು ಕೆಲವು ಖಾಸಗಿ (ಪಟ್ಟಾ) ಜಾಗಗಳಲ್ಲಿ ನೀಡಿರುವುದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿದ್ದು, ಅಂತಹ ಜಾಗದ ಪಟ್ಟಾದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಹಾಗೂ ಅನಧಿಕೃತ ಮರಳುಗಾರಿಕೆಗೆ ಬಳಸುವ ದೋಣಿಗಳು ವಾರಾಹಿ ನದಿಯಲ್ಲಿ ಅಲ್ಲಲ್ಲಿ ಕಂಡುಬಂದಿರುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಿದ್ದು ಇವುಗಳನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಭೂವಿಜ್ಞಾನಿ ಯವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ವಹಿಸುವವರೆಗೆ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ 2 ಲಾರಿಗಳನ್ನು 20 ಮೆಟ್ರಿಕ್ ಟನ್ ಮರಳು ಸಹಿತ ಶಂಕರನಾರಾಯಣ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ‌.